ತೆರಿಗೆ ಕಟ್ಟಿ ಬೆಂಗಳೂರು ಅಭಿವೃದ್ಧಿ ನಾಗರಿಕರು ಕೈ ಜೋಡಿಸಲಿ: ಸಿದ್ದರಾಮಯ್ಯ

ಬೆಂಗಳೂರು, ಮೇ 30: ಸಕಾಲದಲ್ಲಿ ತೆರಿಗೆ ಕಟ್ಟುವುದರ ಮೂಲಕ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಸಾರ್ವಜನಿಕರು ಪಾಲುದಾರರಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಗರಿಕರಿಗೆ ಕರೆ ನೀಡಿದರು.
ಮಂಗಳವಾರ ಮಹಾನಗರಪಾಲಿಕೆ ವತಿಯಿಂದ ಡಾ. ರಾಜ್‌ಕುಮಾರ್ ರಸ್ತೆಯ ವಿವೇಕಾನಂದ ಕಾಲೇಜು ಬಳಿ 14.65 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕೆಳಸೇತುವೆ ಉದ್ಘಾಟಿಸಿ ಮಾತನಾಡಿದ ಅವರು, ಮಳೆ ನೀರು ಕೊಯ್ಲು, ಕಸ ನಿರ್ವಹಣೆ ಹಾಗೂ ತೆರಿಗೆ ಕಟ್ಟುವ ಮೂಲಕ ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಲು ಪ್ರತಿಯೊಬ್ಬರು ಸರಕಾರದ ಕೈ ಜೋಡಿಸಬೇಕು ಎಂದು ತಿಳಿಸಿದರು.
ಬೆಂಗಳೂರಿನಲ್ಲಿ 20 ಲಕ್ಷ ಮನೆಗಳು ತೆರಿಗೆ ಪಾವತಿಸಲಾಗಿದೆ. ತೆರಿಗೆ ಕಟ್ಟಲು ಇಂದು ಕೊನೆಯ ದಿನವಾಗಿದ್ದು, ಇನ್ನಷ್ಟು ಜನರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿ ಶೇ. 5ರ ರಿಯಾಯ್ತಿ ನೀಡಿ ಇನ್ನೂ 15 ದಿನಗಳ ಕಾಲ ವಿಸ್ತರಿಸಲಾಗಿದೆ. ಈ ಸಮಯವನ್ನು ಸದುಪಯೋಗಪಡಿಸಿಕೊಂಡು ಬಾಕಿ ತೆರಿಗೆಯನ್ನು ಪಾವತಿಸಿ ಎಂದು ಅವರು ಹೇಳಿದರು.
ಬೆಂಗಳೂರು ನಗರಕ್ಕೆ ತೆರಿಗೆಯಿಂದ ಕೇವಲ 2 ಸಾವಿರ ಕೋಟಿ ರೂ. ಮಾತ್ರ ಬರುತ್ತಿದೆ. ಆದರೆ, ಅದರ ಬಜೆಟ್ 10 ಸಾವಿರ ಕೋಟಿ ರೂ. ಇನ್ನುಳಿದ ಹಣವನ್ನು ರಾಜ್ಯ ಸರಕಾರವೇ ನೀಡಬೇಕಾಗಿದೆ. ಹೀಗಾಗಿ ಬೆಂಗಳೂರಿನ ಅಭಿವೃದ್ಧಿಯಲ್ಲಿ ಸರಕಾರದ ಜತೆ ಸಾರ್ವಜನಿಕರು ಕೈಜೋಡಿಸಬೇಕು. ಉದ್ಯಾನನಗರಿ ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿರುವ ಬೆಂಗಳೂರು ಕಸದ ನಗರಿ ಆಗುವುದು ಬೇಡ ಎಂದು ಅವರು ಮನವಿ ಮಾಡಿದರು.
ಕಸವನ್ನು ಸಂಸ್ಕರಣ ಮಾಡಲು ಬೆಂಗಳೂರಿನ 7 ಕಡೆ ಸಂಸ್ಕರಣಾ ಘಟಕ ಆರಂಭಿಸಲಾಗಿದೆ. ಬೆಂಗಳೂರು ನಗರದಲ್ಲಿ ಕುಡಿಯವ ನೀರು, ರಸ್ತೆ, ಒಳಚರಂಡಿ ಸೇರಿದಂತೆ ಇನ್ನಿತರ ಮೂಲ ಸೌಕರ್ಯ ಕಲ್ಪಿಸಲು ಸರಕಾರ ಬದ್ಧವಾಗಿದೆ. ಅಭಿವೃದ್ಧಿ ಕೆಲಸ ಮಾಡಲು ಮುಂದಾದರೆ ವಿರೋಧ ಪಕ್ಷಗಳು ಅನಗತ್ಯವಾಗಿ ಟೀಕೆ ಮಾಡುತ್ತವೆ. ಯಾವುದೇ ಟೀಕೆ ಅಭಿವೃದ್ಧಿಗೆ ಪೂರಕವಾಗಿರಬೇಕು ಎಂದ ಅವರು ಹೇಳಿದರು.
ಮೇಯರ್ ಜಿ. ಪದ್ಮಾವತಿ ಮಾತನಾಡಿ, ಬೆಂಗಳೂರಿನ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಸಿದ್ಧರಾಮಯ್ಯ 7300 ಕೋಟಿ ರೂ. ನೀಡಿದ್ದಾರೆ. ಇಷ್ಟೊಂದು ಮೊತ್ತದ ಹಣವನ್ನು ನಗರದ ಅಭಿವೃದ್ಧಿಗೆ ಯಾವ ಮುಖ್ಯಮಂತ್ರಿಯೂ ನೀಡಿರಲಿಲ್ಲ. ವಿವೇಕಾನಂದ ರಸ್ತೆಯಲ್ಲಿ ಪ್ರತಿನಿತ್ಯ 15 ಸಾವಿರ ವಾಹನಗಳು ಸಂಚರಿಸಲಿದ್ದು, ಕೆಳಸೇತುವೆ ಉದ್ಘಾಟನೆಯಿಂದ ಈ ಭಾಗದ ಜನರಿಗೆ ಹಾಗೂ ವಾಹನ ಸವಾರರಿಗೆ ಅನುಕೂಲವಾಗಿದೆ ಎಂದರು.
ಶಾಸಕ ಗೋಪಾಲಯ್ಯ ಮಾತನಾಡಿ, ರಾಜ್‌ಕುಮಾರ್ ಒಳಾಂಗಣ ಕ್ರೀಡಾಂಗಣ ಇನ್ನೆರಡು ತಿಂಗಳಲ್ಲಿ ಉದ್ಘಾಟನೆ ಮಾಡಲಾಗುವುದು.
ಮಹಾಲಕ್ಷ್ಮಿವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೆಚ್ಚನ ಅನುದಾನ ನೀಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಡಾ. ಸಿ.ಎನ್.ಅಶ್ವತ್ಥ್‌ನಾರಾಯಣ, ಉಪಮೇಯರ್ ಆನಂದ್, ಪಾಲಿಕೆ ಆಯುಕ್ತ ಮಂಜುನಾಥ್‌ಪ್ರಸಾದ್, ಸ್ಥಳೀಯ ಪಾಲಿಕೆ ಸದಸ್ಯ ಭದ್ರೇಗೌಡ ಸೇರಿದಂತೆ ಹಲವು ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.







