ವಿ.ಟಿ.ಯು ಫಲಿತಾಂಶದ ಗೊಂದಲ ನಿವಾರಣೆಗೆ ಆಗ್ರಹಿಸಿ ಸಿಎಫ್‌ಐ ಧರಣಿ

ಮಂಗಳೂರು, ಮೇ 30: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಫಲಿತಾಂಶದಲ್ಲಿ ಗೊಂದಲಗಳ ನಿವಾರಣೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಸಿಎಫ್‌ಐ ದ.ಕ. ಜಿಲ್ಲಾ ಸಮಿತಿ ಧರಣಿ ನಡೆಸಿತು.
ಸಿಎಫ್‌ಐ ರಾಜ್ಯ ಸಮಿತಿ ಸದಸ್ಯ ಇರ್ಶಾದ್ ಕಾವು ಮಾತನಾಡಿ ಕರ್ನಾಟಕದಲ್ಲಿ ವಿ.ಟಿ.ಯು. ಹೆಸರು ವಾಸಿಯಾದಂತಹ ಶಿಕ್ಷಣ ಕೇಂದ್ರವಾಗಿದ್ದು ಲಕ್ಷಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಲು ಈ ಸಂಸ್ಥೆಯನ್ನು ಅವಲಂಬಿತರಾಗಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ವಿ.ಟಿ.ಯು ವಿದ್ಯಾರ್ಥಿಗಳಿಂದ ದುಬಾರಿ ಪರೀಕ್ಷಾ ಶುಲ್ಕವನ್ನು ಪಡೆಯುತ್ತಿದೆಯಲ್ಲದೆ ಕಳೆದ ಸಾಲಿನ ಪ್ರಥಮ ಸೆಮಿಸ್ಟರ್ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶ ಇನ್ನೂ ಪ್ರಕಟಿಸಿಲ್ಲ ಎಂದರು.
ಅಲ್ಲದೆ 3ನೆ, 5ನೆ ಹಾಗೂ 7ನೆ ಸೆಮಿಸ್ಟರ್ ಫಲಿತಾಂಶ ಪ್ರಕಟಗೊಂಡಿದ್ದರೂ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಮರು ಮೌಲ್ಯಮಾಪನ ಹಾಗೂ ಮರುಪರೀಕ್ಷೆಯನ್ನು ಏಕಕಾಲದಲ್ಲಿ ಶುಲ್ಕ ಸಮೇತ ಕಟ್ಟಿ ಬರೆಯಬೇಕೆಂದು ಸೂಚಿಸಿದ್ದಾರೆ. ಇದು ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಬಗ್ಗೆ ತೀವ್ರ ಆತಂಕಕ್ಕೀಡುಮಾಡಿದೆ. ಆದುದರಿಂದ ವಿ.ಟಿ.ಯು ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬೆಳಗಾವಿಲ್ಲಿರುವ ವಿ.ಟಿ.ಯು.ಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಸಿಎಫ್‌ಐ ಜಿಲ್ಲಾಧ್ಯಕ್ಷ ಅಥಾವುಲ್ಲ, ಜಿಲ್ಲಾ ಸಮಿತಿ ಸದಸ್ಯ ರಿಯಾಝ್ ಕಡಂಬು ಮಾತನಾಡಿದರು. ಕಾರ್ಯದರ್ಶಿ ಇಮ್ರಾನ್ ಪಿ.ಜೆ. ಕಾರ್ಯಕ್ರಮ ನಿರೂಪಿಸಿದರು.







