ಮಂಗಳೂರು ನಿರೀಕ್ಷೆಯಂತೆ ಬೆಳೆದಿಲ್ಲ: ಶಾಸಕ ಜೆ.ಆರ್.ಲೋಬೊ

ಮಂಗಳೂರು, ಮೇ 30: ನಗರದ ಜನಸಂಖ್ಯೆ ಹೆಚ್ಚಾಗುತ್ತಿದೆ ಮತ್ತು ಬೆಳೆಯುತ್ತಿದೆ ಎಂಬ ಭಾವನೆ ಇದೆ. ಆದರೆ, ಮಂಗಳೂರಿನ ಜನಸಂಖ್ಯೆ 5 ಲಕ್ಷಕ್ಕಿಂತ ಹೆಚ್ಚಿಲ್ಲ. ನಿರೀಕ್ಷೆಯಂತೆ ಮಂಗಳೂರಿನಲ್ಲಿ ಅಭಿವೃದ್ಧಿ ಸಾಧಿಸಿಲ್ಲ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.
ರಥಬೀದಿಯಲ್ಲಿ ನಡೆದ ಫ್ಲಾಟ್ ಮೀಟಿಂಗ್‌ನಲ್ಲಿ ಅವರು ಮಾತನಾಡುತ್ತಿದ್ದರು. ಮಂಗಳೂರು ಇನ್ನಷ್ಟು ಬೆಳೆಯಬೇಕಿದೆ. ಕೈಗಾರಿಕೆಗಳು, ಐಟಿ, ಬಿಟಿ ಕಂಪೆನಿಗಳು ಹೆಚ್ಚಾಗಬೇಕು. ದುಡಿಯುವ ಕೈಗಳಿಗೆ ಕೆಲಸ ಸಿಗಬೇಕು. ಅದಕ್ಕಾಗಿ ಬಂಡವಾಳ ಹೂಡಿಕೆ ಹರಿದು ಬರಬೇಕಾಗಿದೆ, ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಬಂಡವಾಳ ಹೂಡಿಕೆಯಾಗುತ್ತಿಲ್ಲ ಎಂದ ಅವರು ಮಂಗಳೂರಿಗೆ ಎಡಿಬಿ ಎರಡನೇ ಹಂತದ ಕಾಮಗಾರಿಗಳಿಗೆ ಒಪ್ಪಿಗೆ ಸಿಕ್ಕಿದೆ. ಸಾಮಾನ್ಯವಾಗಿ ಎಡಿಬಿ ಯೋಜನೆ ಎರಡನೇ ಬಾರಿಗೆ ಬರುವುದಿಲ್ಲ. ಆದರೆ ಮಂಗಳೂರಿನಲ್ಲಿ ಎರಡನೇ ಹಂತದ ಕಾಮಗಾರಿಗೆ ಸರಕಾರ ಒಪ್ಪಿಗೆ ನೀಡಿದೆ. ಸುಮಾರು 500 ಕೋಟಿ ರೂಪಾಯಿ ಬಂದಿದೆ ಎಂದರು.
ಕುಡಿಯುವ ನೀರು ಮತ್ತು ಒಳಚರಂಡಿ ಯೋಜನೆಗೆ ಈ ಹಣ ವಿನಿಯೋಗಿಸಲಾಗುತ್ತಿದೆ. ಜೊತೆಗೆ ಕುಡಿಯುವ ನೀರು ಒದಗಿಸಲು ಅಮೃತ ಯೋಜನೆ ಅನುಷ್ಠಾನವಾಗುತ್ತಿದೆ. ಇದಕ್ಕಾಗಿ 150 ಕೋ. ರೂ. ವೆಚ್ಚವಾಗುತ್ತಿದೆ. ಈ ಯೋಜನೆಗಳು ವ್ಯವಸ್ಥಿತವಾಗಿ ಅನುಷ್ಠಾನವಾಗುವುದಕ್ಕೆ ಜನರು ಸಹಕರಿಸಬೇಕು ಎಂದ ಲೋಬೊ, ಮಂಗಳೂರು ಮೀನುಗಾರಿಕೆ ಮತ್ತು ಹಳೆ ಬಂದರು ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಸ್ಮಾರ್ಟ್ ಸಿಟಿ ಕೂಡಾ ಬಂದಿದೆ. ಮೀನುಗಾರಿಕೆ ಮತ್ತು ಬಂದರಿನ ಅಭಿವೃದ್ಧಿ ಆದಾಗ ಮಾತ್ರ ಸ್ಮಾರ್ಟ್ ಸಿಟಿ ಕೂಡಾ ಅಭಿವೃದ್ಧಿಯಾಗಲಿದೆ ಎಂದರು.







