ಗೋರಕ್ಷಕರ ಕೃತ್ಯದಿಂದ ರಾಜ್ಯಕ್ಕೆ ಕೆಟ್ಟ ಹೆಸರು: ವಸುಂಧರಾ ರಾಜೇ

ಜೈಪುರ, ಮೇ 30: ಗೋರಕ್ಷಣೆಯ ಹೆಸರಲ್ಲಿ ಇತ್ತೀಚೆಗೆ ಅಲ್ಪಸಂಖ್ಯಾತರ ವಿರುದ್ಧ ನಡೆದಿರುವ ಹಿಂಸಾತ್ಮಕ ಘಟನೆಗಳು ಮತ್ತು ಸೇಡಿನ ಕೃತ್ಯದಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬಂದಿದೆ ಎಂದಿರುವ ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೇ, ಈ ಹಿಂಸಾತ್ಮಕ ಘಟನೆಗಳ ಹಿಂದಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ರಾಜಸ್ತಾನದಲ್ಲಿ ದೇಶಧರ್ಮ ಪ್ರಚಲಿತವಾಗಿದೆ. ಅಪರಾಧಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.
ಇಂತಹ ಘಟನೆಗಳು ದೇಶದಾದ್ಯಂತ ನಡೆಯುತ್ತಿವೆ. ರಾಜಸ್ತಾನದ ಮೇಲೆ ಮಾತ್ರ ಗೂಬೆ ಕೂರಿಸುವಂತಿಲ್ಲ. ಆದರೆ ಇಂತಹ ಕೃತ್ಯಗಳಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬರುವ ಕಾರಣ ಇದನ್ನು ಸಹಿಸಲಾಗದು ಎಂದು ಅವರು ಹೇಳಿದರು. ರಾಜ್ಯದ ಜನರಲ್ಲಿ ನಾವೆಂದೂ ಪಕ್ಷಪಾತ ತೋರಿಲ್ಲ. ಅಲ್ವಾರ್ ಪಟ್ಟಣದಲ್ಲಿ ಜಾನುವಾರು ವ್ಯಾಪಾರಿ ಪೆಹ್ಲು ಖಾನ್‌ರನ್ನು ಥಳಿಸಿ ಕೊಲೆಗೈದ ಪ್ರಕರಣದಲ್ಲಿ ಆರೋಪಿಗಳನ್ನು ತಕ್ಷಣ ಬಂಧಿಸಲಾಗಿದೆ. ಅಜ್ಮೇರ್‌ನಲ್ಲಿ ಸಿಖ್ ವ್ಯಕ್ತಿ ಮೇಲೆ ನಡೆದ ಹಲ್ಲೆ ಪ್ರಕರಣದ ತನಿಖೆಗೆ ಆದೇಶಿಸಲಾಗಿದೆ. ರಾಜಸ್ತಾನದ ಯುವತಿಯೋರ್ವಳನ್ನು ಪ್ರೇಮಿಸಿ ವಿವಾಹವಾಗಲು ಮುಂದಾದ ಕೇರಳ ಮೂಲದ ಇಂಜಿನಿಯರ್ ಅಮಿತ್ ನಾಯರ್ ಎಂಬ ಯುವಕನ ‘ಮರ್ಯಾದಾ ಹತ್ಯೆ’ ನಡೆಸಿದ ಪ್ರಕರಣದ ಆರೋಪಿಗಳನ್ನೂ ಬಂಧಿಸಲಾಗಿದೆ. ರಾಜಸ್ತಾನ ಸರಕಾರ ತನ್ನ ಕೆಲಸ ಮಾಡಿದೆ. ಆದರೆ ಕೇರಳದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರ ಕಗ್ಗೊಲೆ ನಡೆಯುತ್ತಿದ್ದರೂ ಕೇರಳ ಸರಕಾರ ಮಾತ್ರ ಘಟನೆಯ ಬಗ್ಗೆ ತುಟಿಬಿಚ್ಚದೆ ವೌನವಾಗಿದೆ ಎಂದವರು ಟೀಕಿಸಿದರು.







