ಹೊಟೇಲ್, ಔಷಧಾಲಯ ಬಂದ್ ಯಶಸ್ವಿ
ಊಟ-ತಿಂಡಿ-ಔಷಧಿಗಳಿಗಾಗಿ ಪರದಾಡಿದ ಜನತೆ

ಬೆಂಗಳೂರು, ಮೇ 30: ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯನ್ನು ಖಂಡಿಸಿ ಹೊಟೇಲ್ ಉದ್ಯಮ ದೇಶಾದ್ಯಂತ ಕರೆ ನೀಡಿದ್ದ ಹೊಟೇಲ್ ಬಂದ್‌ಗೆ ನಗರದಲ್ಲಿನ ಬಹುತೇಕ ಹೊಟೇಲ್‌ಗಳಿಂದ ಉತ್ತಮ ಬೆಂಬಲ ಸಿಕ್ಕಿತ್ತು. ಇನ್ನೊಂದು ಕಡೆ ಆನ್‌ಲೈನ್‌ನಲ್ಲಿ ಔಷಧಿ ಮಾರಾಟ ವಿರೋಧಿಸಿ ಔಷಧಾಲಯಗಳನ್ನು ಬಂದ್ ಮಾಡಿದ್ದರಿಂದ ರೋಗಿಗಳು ತೊಂದರೆಗೊಳಗಾದರು.
ನಗರದಲ್ಲಿ ಬಹುತೇಕ ಹೊಟೇಲ್‌ಗಳು ಮುಂಜಾನೆಯಿಂದಲೇ ಬಂದ್ ಆಗಿದ್ದರಿಂದ ಹೊಟೇಲ್‌ಗಳನ್ನು ಅವಲಂಬಿಸಿದವರು ಕಾಫಿ, ಟೀ, ತಿಂಡಿ ತಿನಿಸುಗಳಿಲ್ಲದೆ ಪರದಾಡುವಂತಾಯಿತು. ಹೊಟೇಲ್ ಬಂದ್‌ಗೆ ಬೇಕರಿ ಮಾಲಕರೂ ಸಾಥ್ ನೀಡಿದರು. ಇನ್ನು ಹಸಿವು ನೀಗಿಸಿಕೊಳ್ಳಲು ಜನ ರಸ್ತೆ ಬದಿಯಲ್ಲಿನ ಮೊಬೈಲ್ ಕ್ಯಾಂಟೀನ್, ತಳ್ಳುಗಾಡಿ ತಿಂಡಿಗಳಿಗೆ ಮೊರೆಹೋದರು. ಕೆಲವರು ಬನ್‌ಮತ್ತು ಹಣ್ಣುಹಂಪಲುಗಳನ್ನು ತಿಂದು ಹಸಿವು ತಣಿಸಿಕೊಳ್ಳುತಿದ್ದ ಚಿತ್ರ ಸಾಮಾನ್ಯವಾಗಿತ್ತು.
ಹೊಟೇಲ್ ಬಂದ್‌ಗೆ ಬೆಂಬಲ ಸೂಚಿಸಿ ಹೊಟೇಲ್ ಉದ್ಯಮದಾರರು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಹೊಟೇಲ್ ಉದ್ದಿಮೆದಾರರ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್ ಮಾಧ್ಯಮಗಳೊಂದಿಗೆ ಮಾತನಾಡಿ, ಜಿಎಸ್‌ಟಿಯಿಂದ ಹೊಟೇಲ್ ಉದ್ದಿಮೆಗೆ ಬಾರಿ ಹೊಡೆತ ಬೀಳಲಿದೆ. ಯಾವುದೇ ಕಾರಣಕ್ಕೂ ಜಿಎಸ್‌ಟಿ ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು.
ರೋಗಿಗಳ ಪರದಾಟ: ಆನ್‌ಲೈನ್ ಫಾರ್ಮಸಿ ವಿರೋಧಿಸಿ ನಗರದ ಬಹುತೇಕ ಔಷಧ ಮಾರಾಟಗಾರರು ಔಷಧಾಲಯಗಳನ್ನು ಬಂದ್ ಮಾಡಿದ್ದರಿಂದ ರೋಗಿಗಳು ತೊಂದರೆಗೊಳಗಾದರು. ತುರ್ತು ಸೇವೆಗಳಿಗೆ ವಿನಾಯಿತಿ ನೀಡಲಾಗಿತ್ತು. ಆದರೂ ನಗರದ ಕೆಲವೆಡೆ ರೋಗಿಗಳು ಅಗತ್ಯ ಔಷಧಿಗಳು ದೊರಕದೆ ಪರದಾಡುವಂತಾಯಿತು.
ಸರಕಾರಿ ಆಸ್ಪತ್ರೆಗಳಲ್ಲಿ ಜನ ಜಂಗುಳಿ: ನಗರದಲ್ಲಿನ ಸರಕಾರಿ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳು, ಕಿಮ್ಸ್ ಸೇರಿದಂತೆ ಸರಕಾರಿ ಆಸ್ಪತ್ರೆಗಳು ಮತ್ತು ಕೆಲವು ನರ್ಸಿಂಗ್ ಹೋಮ್‌ಗಳಲ್ಲಿರುವ ಮೆಡಿಕಲ್ ಶಾಪ್‌ಗಳಿಗೆ ಬಂದ್‌ನಿಂದ ವಿನಾಯಿತಿ ನೀಡಲಾಗಿತ್ತು. ಇದರಿಂದ ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿತ್ತು.







