ಉಪಕಾರ್ಮಿಕ ಆಯುಕ್ತರ ಕಚೇರಿ ಮುಂದೆ ಕಾರ್ಮಿಕರ ಧರಣಿ

ಮಂಗಳೂರು, ಮೇ 30: ನ್ಯಾಯಾಲಯದ ತೀರ್ಪನ್ನು ಪಾಲಿಸದ ಬೀಡಿ ಕಂಪೆನಿಗಳ ಮಾಲಕರ ವಿರುದ್ಧ ಕ್ರಮ ಜರಗಿಸುವಂತೆ ಆಗ್ರಹಿಸಿ ಎಸ್‌ಕೆ ಬೀಡಿ ಫೆಡರೇಶನ್ ನೇತೃತ್ವದಲ್ಲಿ ನಗರದ ಕದ್ರಿಯಲ್ಲಿರುವ ಉಪ ಕಾರ್ಮಿಕ ಆಯುಕ್ತರ ಕಚೇರಿ ಮುಂದೆ ಎಐಟಿಯುಸಿ ಸಂಸ್ಥೆಗೆ ಸಂಯೋಜನಗೊಂಡಿರುವ ಬೀಡಿ ಕಾರ್ಮಿಕರು ಮಂಗಳವಾರ ಧರಣಿ ನಡೆಸಿದರು.
ಬೀಡಿ ಕಾರ್ಮಿಕರಿಗೆ 12.75 ರೂ. ತುಟ್ಟಿಭತ್ತೆ ನೀಡುವಂತೆ ಸೂಚಿಸಿದ್ದ ಸರಕಾರ ಆ ಬಳಿಕ ತನ್ನ ನಿರ್ಧಾರದಿಂದ ಹಿಂದೆ ಸರಿದು ಬೀಡಿ ಕಂಪೆನಿಯ ಮಾಲಕರಿಗೆ ತುಟ್ಟಿ ಭತ್ತೆ ನೀಡುವುದರಿಂದ 1 ವರ್ಷ ಮಟ್ಟಿಗೆ ವಿನಾಯಿತಿ ನೀಡಿತ್ತು. ಇದನ್ನು ಪ್ರಶ್ನಿಸಿ ಎಐಟಿಯುಸಿ ಹೈಕೋರ್ಟ್ ಮೊರೆ ಹೋಗಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್ ಸರಕಾರದ ನಿರ್ಧಾರವನ್ನು ಪ್ರಶ್ನಿಸಿತಲ್ಲದೆ, ಬೀಡಿ ಕಾರ್ಮಿಕರಿಗೆ 2015 ರಿಂದ 12.75 ರೂ. ತುಟ್ಟಿಭತ್ತೆ ನೀಡುವಂತೆ ಆದೇಶಿಸಿತ್ತು. ಆದರೆ ರಾಜ್ಯ ಸರಕಾರ ಅದನ್ನು ಇನ್ನೂ ಪಾಲಿಸಿಲ್ಲ. ಸರಕಾರದ ಈ ನೀತಿಯನ್ನು ಖಂಡಿಸಿ ಮತ್ತು ಬೀಡಿ ಕಂಪೆನಿಗಳ ಮಾಲಕರಿಂದ ತುಟ್ಟಿಭತ್ತೆ ವಸೂಲಿ ಮಾಡಿ ಕಾರ್ಮಿಕರಿಗೆ ಹಂಚುವ ವ್ಯವಸ್ಥೆ ಮಾಡಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.
ಧರಣಿಯಲ್ಲಿ ಸಿಪಿಐ ಮತ್ತು ಎಐಟಿಯುಸಿ ಮುಖಂಡರಾದ ವಿ.ಎಸ್.ಬೇರಿಂಜ, ಬಿ.ಶೇಖರ್, ಸುರೇಶ್ ಕುಮಾರ್ ಬಂಟ್ವಾಳ್, ಕೆ.ವಿ.ಭಟ್, ಎಚ್.ವಿ.ರಾವ್, ವಿ.ಕುಕ್ಯಾನ್, ಎಂ. ಕರುಣಾಕರ್, ಸುಲೋಚನಾ, ಸರಸ್ವತಿ, ಚಿತ್ರಾಕ್ಷಿ ಮತ್ತಿತರರು ಪಾಲ್ಗೊಂಡಿದ್ದರು.