ಕುಂಜತ್ತಬೈಲ್: ಗುಂಪುಗಳ ಮಧ್ಯೆ ಹೊಡೆದಾಟ; ವಿದ್ಯಾರ್ಥಿ ಸಹಿತ ಇಬ್ಬರು ಆಸ್ಪತ್ರೆಗೆ ದಾಖಲು
ಇತ್ತಂಡದ ಹಲವರ ವಿರುದ್ಧ ಪ್ರಕರಣ ದಾಖಲು
ಮಂಗಳೂರು, ಮೇ 30: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜತ್ತಬೈಲ್‌ನ ಕುಳ ಎಂಬಲ್ಲಿ ಎರಡು ಗುಂಪುಗಳ ಮಧ್ಯೆ ಹೊಡೆದಾಟ ಸಂಭವಿಸಿದ್ದು, ಗಾಯಗೊಂಡ ವಿದ್ಯಾರ್ಥಿ ಸಹಿತ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಧ್ಯೆ ಎರಡೂ ತಂಡದ ಹಲವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಘಟನೆಯಲ್ಲಿ ಕುಂಜತ್ತಬೈಲ್‌ನ ಸಂಪತ್ ಕುಮಾರ್ (20) ಮತ್ತು 16 ವರ್ಷ ಪ್ರಾಯದ ಬಾಲಕ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆಯ ವಿವರ: ಕುಂಜತ್ತಬೈಲ್ ಬಳಿಯ ಮೈದಾನದಲ್ಲಿ ಪ್ರತ್ಯೇಕವಾಗಿ ಕ್ರಿಕೆಟ್ ಆಟವಾಡುತ್ತಿದ್ದಾಗ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಸಂಪತ್ ಕುಮಾರ್ ಮತ್ತು 16 ವರ್ಷದ ಬಾಲಕನ ಮಧ್ಯೆ ಮಾತಿನ ಚಕಮಕಿ ನಡೆಯಿತು ಎನ್ನಲಾಗಿದೆ. ಅಂದರೆ ಮೈದಾನದ ಪಿಚ್‌ನಲ್ಲಿದ್ದ ಕಲ್ಲೊಂದನ್ನು ತೆಗೆಯಲು ಅಪ್ರಾಪ್ತ ವಯಸ್ಸಿನ ಬಾಲಕನ ಬಳಿ ಸಂಪತ್ ಕುಮಾರ್ ಒತ್ತಾಯಿಸಿದ್ದು, ಈ ವಿಚಾರದಲ್ಲಿ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭ ಸಂಪತ್ ಕುಮಾರ್ ಬಾಲಕನಿಗೆ ಕೈ ಹಾಗು ಬ್ಯಾಟ್‌ನಿಂದ ಹಲ್ಲೆ ನಡೆಸಿದ ಎಂದು ತಿಳಿದು ಬಂದಿದೆ.
ಬಾಲಕನಿಗೆ ಹಲ್ಲೆ ನಡೆಸಿದ ಬಗ್ಗೆ ತಂಡವೊಂದು ಸಂಪತ್ ಕುಮಾರ್ ಬಳಿ ವಿಚಾರಿಸಲು ಹೋಗಿದ್ದು, ಈ ಸಂದರ್ಭ ಇತ್ತಂಡದ ಮಧ್ಯೆ ಮತ್ತೆ ಹೊಡೆದಾಟ ಸಂಭವಿಸಿದೆ. ದುಷ್ಕರ್ಮಿಗಳು ಮರದ ಸೋಂಟೆ ಸಹಿತ ಮಾರಕಾಯುಧ ಬಳಸಿದ ಕಾರಣ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ರಾತ್ರಿ ಸುಮಾರು 10:15ಕ್ಕೆ ಕುಂಜತ್ತಬೈಲ್‌ನ ಸಿದ್ದೀಕ್ ಜುಮಾ ಮಸೀದಿಯಲ್ಲಿ ರಮಝಾನ್‌ನ ವಿಶೇಷ ನಮಾಝ್ ಮುಗಿಸಿ ಮನೆಗೆ ಮರಳುತ್ತಿದ್ದ ಅಬ್ದುಲ್ ರಶೀದ್ (21) ಎಂಬಾತನಿಗೆ ಸುಮಾರು 30 ಮಂದಿಯ ತಂಡವೊಂದು ಹಲ್ಲೆ ನಡೆಸಿದೆ. ಒಟ್ಟಿನಲ್ಲಿ ಕುಂಜತ್ತಬೈಲ್‌ನಲ್ಲಿ ಕ್ಷುಲ್ಲಕ ವಿಚಾರದಲ್ಲಿ ಹೊಡೆದಾಟ ಸಂಭವಿಸಿದ್ದು, ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ.
ಘಟನೆಗೆ ಸಂಬಂಧಿಸಿ ಕಾಲೇಜು ವಿದ್ಯಾರ್ಥಿಯಾಗಿರುವ ಅಪ್ತಾಪ್ತ ವಯಸ್ಸಿನ ಬಾಲಕ ಕಾವೂರು ಠಾಣೆಗೆ ದೂರು ನೀಡಿ ಆರೋಪಿಗಳಾದ ಸಂದೇಶ್ ಕುಮಾರ್, ಸಂಪತ್ ಕುಮಾರ್, ನಿತೇಶ್ ಯಾನೆ ನೀತು, ಪುನೀತ್, ನಿಖಿತ್ ಎಂಬವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ತನ್ಮಧ್ಯೆ ಸಂಪತ್ ಕುಮಾರ್ ಕೂಡ ಪೊಲೀಸರಿಗೆ ದೂರು ನೀಡಿ ಶಫೀಕ್, ಇರ್ಫಾನ್, ರಮೀಝ್, ಇಮ್ತಿಯಾಝ್, ಅನ್ಸಾರ್, ರಿಯಾಝ್, ನಾಸಿರ್ ಸಹಿತ ಸುಮಾರು 15 ಮಂದಿಯ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದಾರೆ. ಕಾವೂರು ಪೊಲೀಸರು ದೂರುಗಳನ್ನು ಸ್ವೀಕರಿಸಿ ತನಿಖೆ ನಡೆಸುತ್ತಿದ್ದಾರೆ.







