ವಿವಿಯಲ್ಲಿ ಹೊರಗುತ್ತಿಗೆ ಆಧಾರದ ಕಾರ್ಮಿಕರಿಗೆ ವೇತನ ಬಾಕಿ: ಧರಣಿ

ಕೊಣಾಜೆ, ಮೇ 30: ಹೊರಗುತ್ತಿಗೆ ಆಧಾರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಎರಡು ತಿಂಗಳಿನಿಂದ ವೇತನ ಸಿಗದ ಹಿನ್ನೆಲೆಯಲ್ಲಿ ಮಂಗಳವಾರ 100 ರಷ್ಟು ಕಾರ್ಮಿಕರು ಕೆಲಸಕ್ಕೆ ಹಾಜರಾಗದೆ ಮಂಗಳೂರು ವಿ.ವಿ.ಯ ಆಡಳಿತ ಕಚೇರಿ ಒಳಗಡೆ ಕುಳಿತು ಧರಣಿ ನಡೆಸಿದರು.
ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಸ್ವೀಪರ್ಸ್, ಸೆಕ್ಯುರಿಟಿ ಸಿಬ್ಬಂದಿ, ಗಾರ್ಡನ್, ನೀರು ಸರಬರಾಜು ವಿಭಾಗಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು ಮಂಗಳವಾರ ಬೆಳಗ್ಗಿನಿಂದ ಕೆಲಸಕ್ಕೆ ಹಾಜರಾಗದೆ ಆಡಳಿತ ಕಚೇರಿಯೊಳಗಡೆ ಧರಣಿ ಕುಳಿತರು. ಕುಲಪತಿ ಸ್ಥಳಕ್ಕೆ ಬರುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಜಿಲ್ಲಾ ದಲಿತ ಸಂಘನೆಗಳ ಒಕ್ಕೂಟದ ಸಂಚಾಲಕ ಅಶೋಕ್ ಕೊಂಚಾಡಿ ಅವರು, ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಕೆನಾನ್ ಡಿಟೆಕ್ಟಿವ್ ಸೆಕ್ಯುರಿಟಿ ಸರ್ವಿಸಸ್, ಸ್ಟಾರ್ ಎಂಪ್ಲಾಯ್‌ಮೆಂಟ್ ಬ್ಯುರೋ ಏಜೆನ್ಸಿಗಳಡಿ 1,000 ದಷ್ಟು ಹೊರಗುತ್ತಿಗೆ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಎರಡು ತಿಂಗಳಿನಿಂದ ಕಾರ್ಮಿಕರಿಗೆ ಏಜೆನ್ಸಿಗಳು ವೇತನವನ್ನೇ ನೀಡಿಲ್ಲ. ಇದರಿಂದ ಕಾರ್ಮಿಕರು ಬದುಕು ಸಾಗಿಸಲು ಕಷ್ಟಕರವಾದ ಸ್ಥಿತಿಯಲ್ಲಿದ್ದಾರೆ. ಕಾರ್ಮಿಕರ ನಿಗದಿತ ವೇತನವನ್ನು ಸರಕಾರ ಈಗಾಗಲೇ ನಿಗದಿಪಡಿಸಿದೆ. ಎರಡು ವರ್ಷದಲ್ಲಿ ಮೂರು ಬಾರಿ ವೇತನದ ಪರಿಷ್ಕರಣೆಯನ್ನೂ ಮಾಡಿದೆ. ಆದರೂ ಕಾರ್ಮಿಕರಿಗೆ ‘ಎ’ ಗ್ರೇಸ್ ಆಗಿರುವ ವೇತನವನ್ನು ಈವರೆಗೆ ನೀಡಿಲ್ಲ. ಪಿ.ಎಫ್ ಹಾಗೂ ಇಎಸ್ ಐ ಕೂಡಾ ನೀಡಿಲ್ಲ. ಸಂಬಂಧಿಸಿದ ಕಾರ್ಮಿಕರು ಉಪಕುಲಪತಿಗಳು, ಕುಲಸಚಿವರಿಗೆ ಮನವಿ ಮಾಡಿದರೂ ಸ್ಪಂಧನೆ ದೊರೆತಿಲ್ಲ. ಕಾರ್ಮಿಕರು ಗುತ್ತಿಗೆ ಪಡೆದುಕೊಂಡಿರುವ ಏಜೆನ್ಸಿಗಳಿಗೆ ಪತ್ರ ಕಳುಹಿಸಿದರೂ ಅದು ವಾಪಸ್ಸಾಗುತ್ತಿದೆ. ಅವ್ಯವಹಾರದಲ್ಲಿ ತೊಡಗಿರುವ ಏಜೆನ್ಸಿಗಳ ಮೇಲೆ ಸಂಬಂಧಿಸಿದ ಇಲಾಖೆ ಕ್ರಮಕೈಗೊಳ್ಳದಿರುವುದು ಕಳವಳಕಾರಿ. ಈ ಕೂಡಲೇ ಪರಿಷ್ಕರಣೆಯಾದ ವೇತನ, ಪಿ.ಎಫ್, ಇಎಸ್‌ಐ ಹಾಗೂ ಎರಡು ತಿಂಗಳ ವೇತನವನ್ನು ನೀಡದೇ ಇದ್ದಲ್ಲಿ ಇಡೀ ಕಾರ್ಮಿಕ ಸಂಘಟನೆಗಳನ್ನು ಜತೆಗೂಡಿಸಿ, ಬೃಹತ್ ಹೋರಾಟ ನಡೆಸುವುದು ಅನಿವಾರ್ಯವಾದೀತು ಎಂದು ಎಚ್ಚರಿಸಿದರು.
ಪದ್ಮಾವತಿ.ಯಸ್.ಶೆಟ್ಟಿ ಸಿಐಟಿಯು ಜಿಲ್ಲಾ ಸಮಿತಿ ಸದಸ್ಯೆ, ಯು.ಜಯಂತ್ ನಾಯ್ಕೆ, ದಿವಾಕರ್, ಸಿಐಟಿಯು ರಾಜ್ಯ ಸಮಿತಿ ಸದಸ್ಯ ಬಾಬು ಪಿಲಾರ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.
ಕುಲಸಚಿವರಿಂದ ಭರವಸೆ:
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಕುಲಸಚಿವ ಲೋಕೇಶ್ ಅವರು ಗುತ್ತಿಗೆ ಕಂಪೆನಿಗಳಿಗೆ ಮಂಗಳೂರು ವಿ.ವಿ ಆಡಳಿತ ವೇತನ ಪಾವತಿಸಿದೆ. ಅವರಿಂದ ವಿಳಂಬವಾಗಿದ್ದು, ಇಂದೇ ಕಾರ್ಮಿಕರ ಖಾತೆಗಳಿಗೆ ವೇತನ ಪಾವತಿಯಾಗುವುದು ಎಂದ ಅವರು ಪ್ರತಿಭಟನೆಯನ್ನು ಹಿಂಪಡೆಯುವಂತೆ ಮನವಿ ಮಾಡಿಕೊಂಡರು. ಕಾರ್ಮಿಕರ ಪಿ.ಎಫ್ ಮತ್ತು ಇ.ಎಸ್.ಐ ಕುರಿತು ಒಂದು ತಿಂಗಳ ಅವಧಿಯ ಬಳಿಕ ಅನುಷ್ಠಾನಕ್ಕೆ ತರಲಾಗುವುದು ಎಂದರು.