ಯುಪಿಎ ಅವಧಿಯಲ್ಲಿ ವಾಯುಯಾನ ಇಲಾಖೆಯ ವ್ಯವಹಾರ: ಮೂರು ಎಫ್‌ಐಆರ್ ದಾಖಲಿಸಿದ ಸಿಬಿಐ

ಹೊಸದಿಲ್ಲಿ, ಮೇ 30: ಈ ಹಿಂದಿನ ಯುಪಿಎ ಸರಕಾರದ ಆಡಳಿತಾವಧಿಯಲ್ಲಿ ನಾಗರಿಕ ವಾಯುಯಾನ ಇಲಾಖೆ ನಡೆಸಿದ ವ್ಯವಹಾರದ ಕುರಿತು ಸಿಬಿಐ ಮೂರು ಎಫ್‌ಐಆರ್ ದಾಖಲಿಸಿದೆ.
ಈ ಹಿಂದಿನ ಏರ್ ಇಂಡಿಯ ಸಂಸ್ಥೆಗೆ 50 ಬೋಯಿಂಗ್ ವಿಮಾನಗಳನ್ನು ಖರೀದಿಸಿರುವುದು , ವಿಮಾನಗಳನ್ನು ಲೀಸ್‌ಗೆ ನೀಡಿರುವುದು , ಲಾಭದಾಯಕ ಅಂತರಾಷ್ಟ್ರೀಯ ವಾಯುಯಾನ ಮಾರ್ಗಗಳನ್ನು ಖಾಸಗಿ ವಿಮಾನಯಾನ ಸಂಸ್ಥೆಗೆ ವಹಿಸಿಕೊಟ್ಟಿರುವುದು - ಈ ಮೂರು ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದರೆ, ಏರ್ ಇಂಡಿಯ ಮತ್ತು ಇಂಡಿಯನ್ ಏರ್‌ಲೈನ್ಸ್ ಸಂಸ್ಥೆಗಳ ವಿಲೀನ ಪ್ರಕ್ರಿಯೆಯನ್ನು ಪ್ರಾಥಮಿಕ ತನಿಖೆ ಎಂದು ನೋಂದಾಯಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಕೇಂದ್ರದ ಮಾಜಿ ವಿತ್ತಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದ ಬೆನ್ನಲ್ಲೇ ಈ ಪ್ರಕರಣಗಳು ದಾಖಲಾಗಿವೆ. ನಿಯಂತ್ರಕ ಮತ್ತು ಮಹಾ ಲೆಕ್ಕ ಪರಿಶೋಧಕರು ಸಂಸತ್ತಿನಲ್ಲಿ 2011ರಲ್ಲಿ ಮಂಡಿಸಿದ ವರದಿ ಮತ್ತು ಸಂಸತ್ತಿನ ಲೆಕ್ಕಪತ್ರ ಸಮಿತಿ ಸಲ್ಲಿಸಿದ ವರದಿಯ ಆಧಾರದಲ್ಲಿ ಎಫ್‌ಐಆರ್ ಮಂಡಿಸಲಾಗಿದ್ದು ಎಫ್‌ಐಆರ್‌ನಲ್ಲಿ ಯಾವುದೇ ಸರಕಾರಿ ಅಧಿಕಾರಿಗಳ ಹೆಸರು ಉಲ್ಲೇಖವಾಗಿಲ ್ಲ. ಸ್ವಾಧೀನತೆ ಪ್ರಕ್ರಿಯೆಯಲ್ಲಿ ಆಗಿರುವ ವಿಳಂಬವು ರಾಷ್ಟ್ರೀಯ ವಿಮಾನಯಾನ ಸಂಸ್ಥೆಗೆ ಭಾರೀ ನಷ್ಟ ಉಂಟು ಮಾಡಿದೆ ಎಂದು ಎರಡೂ ವರದಿಯಲ್ಲಿ ತಿಳಿಸಲಾಗಿದೆ.
ಬೋಯಿಂಗ್ ವಿಮಾನ ಖರೀದಿ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ- ವಕೀಲ ಪ್ರಶಾಂತ್ ಭೂಷಣ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಂದರ್ಭ , 2017ರ ಜೂನ್ ಒಳಗೆ ತನಿಖೆ ಮುಗಿಸುವಂತೆ ಸುಪ್ರೀಂಕೋರ್ಟ್ ಸಿಬಿಐಗೆ ಸೂಚಿಸಿತ್ತು.
ಈ ಹಿನ್ನೆಲೆಯಲ್ಲಿ ಪುರಾವೆಗಳನ್ನು ಪರಿಶೀಲಿಸಿದ ಬಳಿಕ ಮೂರು ಪ್ರತ್ಯೇಕ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ. ತನಿಖೆ ಶೀಘ್ರ ಮುಗಿಯಲಿದೆ. ಬೋಯಿಂಗ್ ವಿಮಾನ ಖರೀದಿ ಪ್ರಕ್ರಿಯೆಯಲ್ಲಿ ಪ್ರಕರಣ ದಾಖಲಿಸಲು ಮೇ 27ರಂದು ಸಿಬಿಐ ನಿರ್ದೇಶಕರು ಅನುಮತಿ ನೀಡಿದ್ದಾರೆ ಎಂದು ಹಿರಿಯ ಸಿಬಿಐ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಉಳಿದ ಎರಡು ಪ್ರಕರಣಗಳಾದ ವಿಲೀನ ಪ್ರಕ್ರಿಯೆ ಮತ್ತು ಲಾಭದಾಯಕ ವಿಮಾನ ಮಾರ್ಗಗಳನ್ನು ಬಿಟ್ಟುಕೊಟ್ಟಿರುವುದು- ಇವು ರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ಅದಕ್ಷ ನಿರ್ವಹಣೆಗೆ ಸಂಬಂಧಿಸಿದ ವಿಷಯವಾಗಿದೆ.2004ರಿಂದ 2014ರವರೆಗಿನ ಹತ್ತು ವರ್ಷದ ಅವಧಿಯಲ್ಲಿ (ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿತ್ತು) ರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ನಷ್ಟ 63 ಕೋಟಿ ರೂ.ಯಿಂದ 7,000 ಕೋಟಿ ರೂ.ಗೆ ತಲುಪಿತ್ತು.
ಎಫ್‌ಐಆರ್‌ನಲ್ಲಿ ‘ನಾಗರಿಕ ವಿಮಾನಯಾನ ಸಚಿವಾಲಯದ ಅನಾಮಧೇಯ ಅಧಿಕಾರಿ’ ಎಂದಷ್ಟೇ ಉಲ್ಲೇಖಿಸಲಾಗಿದೆ. ಏರ್‌ಇಂಡಿಯಾವು ತರಾತುರಿಯಲ್ಲಿ ಬೋಯಿಂಗ್ ವಿಮಾನವನ್ನು ಖರೀದಿಸುವಂತೆ ಒತ್ತಡ ಬಂದಿತ್ತು ಎಂದು ಲೆಕ್ಕಪಾಲರ ವರದಿಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ನಾಗರಿಕ ವಾಯುಯಾನ ಸಚಿವ ಪ್ರಫುಲ್ ಪಟೇಲ್, ಈ ಬಗ್ಗೆ ನನಗೇನೂ ತಿಳಿಯದು. ಆದರೆ ಇದು ನಿಜಕ್ಕೂ ವಾಸ್ತವವಾಗಿದ್ದರೆ ನಾನು ಖುಷಿ ಪಡುತ್ತೇನೆ. ಅವರು ತನಿಖೆ ನಡೆಸಬೇಕು ಮತ್ತು ಸತ್ಯ ಹೊರಬರಲೇ ಬೇಕು ಎಂದಿದ್ದಾರೆ.
ವಿಮಾನ ಖರೀದಿ ಮತ್ತು ವಿಲೀನ ಪ್ರಕ್ರಿಯೆ- ಈ ಎರಡು ನಿರ್ಧಾರಗಳನ್ನು ಅಂದಿನ ವಿತ್ತ ಸಚಿವ ಪಿ.ಚಿದಂಬರಂ ಮತ್ತು ಅಂದಿನ ವಿದೇಶಾಂಗ ವ್ಯವಹಾರ ಸಚಿವ ಪ್ರಣವ್ ಮುಖರ್ಜಿ ನೇತೃತ್ವದ ಉನ್ನತ ತಂಡವೊಂದು ಕೈಗೊಂಡಿತ್ತು. ನಾಗರಿಕ ವಿಮಾನ ಯಾನ ಸಚಿವರಾಗಿದ್ದ ಪ್ರಫುಲ್ ಪಟೇಲ್ ಈ ತಂಡದ ಸದಸ್ಯರಾಗಿದ್ದರು.







