‘ಕೆಎಂಎಫ್ ಮಾದರಿಯಲ್ಲಿ ಮಾಂಸದ ಮಳಿಗೆ ಆರಂಭ’
ಬೆಂಗಳೂರು, ಮೇ 30: ಕೆಎಂಎಫ್ ಹಾಗೂ ಹಾಪ್‌ಕಾಮ್ಸ್ ಮಾದರಿಯಲ್ಲಿ ರಾಜ್ಯದ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಕುರಿ ಹಾಗೂ ಮೇಕೆ ಮಾಂಸದ ಮಳಿಗೆಗಳನ್ನು ತೆರೆಯಲು ರಾಜ್ಯ ಸರಕಾರ ನಿರ್ಧರಿಸಿದೆ. ಪ್ರಾಯೋಗಿಕವಾಗಿ ರಾಜಧಾನಿ ಬೆಂಗಳೂರು, ಮೈಸೂರು, ಮಂಗಳೂರು, ತುಮಕೂರು, ದಾವಣಗೆರೆ, ಶಿವಮೊಗ್ಗ, ಕಲಬುರಗಿ, ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಒಟ್ಟು 40 ಮಳಿಗೆಗಳನ್ನು ತೆರೆಯಲು ಸರಕಾರ ಅನುಮತಿ ನೀಡಿದೆ.
ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರು ಹಾಗೂ ಗ್ರಾಹಕರಿಂದ ವ್ಯಕ್ತವಾಗುವ ಅಭಿಪ್ರಾಯವನ್ನು ಕ್ರೋಡೀಕರಿಸಿ ಇನ್ನುಳಿದ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಮಾಂಸದ ಮಳಿಗೆಗಳನ್ನು ಆರಂಭಿಸಲು ಸರಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಂಪೂರ್ಣ ಹವಾನಿಯಂತ್ರಿತ, ಸುಸಜ್ಜಿತ ಯಂತ್ರಗಳು, ಉತ್ತಮವಾದ ಪರಿಸರ ಹಾಗೂ ಸಾರ್ವಜನಿಕ ಸ್ನೇಹಿಯಾಗಿರುವಂತಹ ಮಳಿಗೆಗಳನ್ನು ಸ್ಥಾಪಿಸಲು ಮುಂದಾಗಿರುವ ತಲಾ ಒಂದು ಮಳಿಗೆಗೆ 1.25 ಲಕ್ಷ ರೂ.ಗಳ ಅನುದಾನವನ್ನು ನೀಡಲಿದೆ. ಮಾಂಸವನ್ನು ಶೇಖರಿಸಿಟ್ಟುಕೊಳ್ಳಲು ವಿಶೇಷ ಆದ್ಯತೆ ನೀಡಲಾಗುತ್ತದೆ. ಈ ಮಳಿಗೆಗಳನ್ನು ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ವೈದ್ಯಾಧಿಕಾರಿಗಳು ಕಾಲಕಾಲಕ್ಕೆ ತಪಾಸಣೆ ನಡೆಸಲಿದ್ದಾರೆ. ಇದರಿಂದಾಗಿ, ಮಳಿಗೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತದೆ ಎನ್ನಲಾಗಿದೆ.
ಆನ್‌ಲೈನ್‌ನಲ್ಲೂ ಲಭ್ಯ: ಗೃಹ ಬಳಕೆಯ ವಸ್ತುಗಳನ್ನು ಮನೆಯಲ್ಲಿ ಕೂತು ಆನ್‌ಲೈನ್‌ನಲ್ಲಿ ಪಡೆಯುವ ಮಾದರಿಯಲ್ಲಿ ಮಾಂಸ ವನ್ನು ಸಾರ್ವಜನಿಕರು ಈ ಮಳಿಗೆಗಳಿಂದ ಆನ್‌ಲೈನ್ ಮೂಲಕ ಖರೀದಿಸಬಹುದಾಗಿದೆ ಎಂದು ತಿಳಿದು ಬಂದಿದೆ. ಗ್ರಾಹಕರ ರುಚಿಗೆ ಅನುಗುಣವಾಗಿ ಮಾಂಸದ ಖಾದ್ಯಗಳನ್ನು ತಯಾರಿಸಿ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಿ ಕೊಳ್ಳಲಾಗುತ್ತಿದ್ದು, ಸರಕಾರ ಈ ಬಗ್ಗೆ ಸಿದ್ಧತೆಯಲ್ಲಿ ತೊಡಗಿದೆ ಎಂದು ಹೇಳಲಾಗಿದೆ.