ಸರಕಾರಿ ಜಮೀನಿನ ಅಕ್ರಮ ಮಾರಾಟ: ತೆಲಂಗಾಣದಲ್ಲಿ ನೂರಾರು ಕೋಟಿ ರೂ. ಮೊತ್ತದ ಹಗರಣ ಬೆಳಕಿಗೆ

ತೆಲಂಗಾಣ, ಮೇ 30: ಐಟಿ ಕೇಂದ್ರ ಸ್ಥಾಪನೆಗೆ ಪ್ರಶಸ್ತ ಸ್ಥಳಗಳಲ್ಲಿ ಒಂದೆನಿಸಿರುವ ಹೈದರಾಬಾದ್‌ನಲ್ಲಿ ನೂರಾರು ಕೋಟಿ ರೂ. ಮೊತ್ತದ ಭೂಹಗರಣವೊಂದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಓರ್ವ ಸರಕಾರಿ ಅಧಿಕಾರಿ ಮತ್ತು ಎರಡು ರಿಯಲ್ ಎಸ್ಟೇಟ್ ಸಂಸ್ಥೆಗಳ ನಿರ್ದೇಶಕರನ್ನು ಬಂಧಿಸಲಾಗಿದೆ.
ಸಾಫ್ಟ್‌ವೇರ್ ಸಂಸ್ಥೆಗಳ ಕೇಂದ್ರ ಎನಿಸಿರುವ ಸೈಬರಾಬಾದ್ ಎಂಬ ಊರಿನಲ್ಲಿ 693 ಎಕರೆ ಸರಕಾರಿ ಜಮೀನನ್ನು ಕಳೆದ ಐದಾರು ವರ್ಷಗಳಿಂದ ಖಾಸಗಿ ಸಂಸ್ಥೆಗಳಿಗೆ ವರ್ಗಾಯಿಸಲಾಗಿದ್ದು ಈ ಪ್ರಕರಣದಲ್ಲಿ ಭಾರೀ ಲಂಚ ಸಂದಾಯವಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ವಿವರವನ್ನು ಹಾಗೂ ಭೂ ವ್ಯವಹಾರದ ನೋಂದಾವಣೆ ಪ್ರಕ್ರಿಯೆಗಳನ್ನು ಪರಿಶೀಲಿಸಿರುವ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಸಿಐಡಿ ತನಿಖೆಗೆ ಆದೇಶಿಸಿದ್ದಾರೆ. ಸುವಿಶಾಲ್ ಪವರ್ ಜೆನ್ ಸಂಸ್ಥೆಯ ನಿರ್ದೇಶಕ ಪಿವಿಎಸ್ ಶರ್ಮ ಮತ್ತು ಟ್ರಿನಿಟಿ ಇನ್‌ಫ್ರವೆಂಚರ್ಸ್ ಸಂಸ್ಥೆಯ ನಿರ್ದೇಶಕ ಪಾರ್ಥಸಾರಥಿಯವರನ್ನು ಪೊಲೀಸರು ಬಂಧಿಸಿದ್ದಾರೆ. ಸರಕಾರಿ ಅಧಿಕಾರಿ ಆರ್.ಶ್ರೀನಿವಾಸ ರಾವ್ ಎಂಬಾತ ಸರಕಾರದ ಜಮೀನನ್ನು ಈ ಎರಡು ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿ 587 ಕೋಟಿ ರೂ. ನಷ್ಟಕ್ಕೆ ಕಾರಣವಾಗಿರುವ ಆರೋಪವಿದ್ದು ಇವರನ್ನೂ ಬಂಧಿಸಲಾಗಿದೆ.
ಆದರೆ ಖಾಸಗಿ ವ್ಯಕ್ತಿಗಳು ತಮ್ಮ ಸ್ವಂತ ಜಮೀನು ಎಂದು ಹೇಳಿ ತಮಗೆ ಈ ಭೂಮಿ ಮಾರಾಟ ಮಾಡಿದ್ದಾರೆ ಎಂದು ಬಂಧಿತ ನಿರ್ದೇಶಕರು ಹೇಳಿದ್ದಾರೆ. ಈ ಎರಡು ರಿಯಲ್ ಎಸ್ಟೇಟ್ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗಿದ್ದು ಭೂಮಿಯ ಖರೀದಿ ಸಂದರ್ಭ ಯಾವುದೇ ಬೋರ್ಡ್ ಮೀಟಿಂಗ್ ನಡೆದಿಲ್ಲ. ಅಥವಾ ಕನಿಷ್ಟ ನೋಟಿಸ್ ಕೂಡಾ ಪ್ರಕಟಿಸಿಲ್ಲ. ಹಲವು ಕಾನೂನು ಕ್ರಮಗಳನ್ನು ಮೀರಿರುವುದು ಸ್ಪಷ್ಟವಾಗಿದೆ ಎಂದು ಸೈಬರಾಬಾದ್ ಪೊಲೀಸ್ ಆಯುಕ್ತ ಸಂದೀಪ್ ಶಾಂಡಿಲ್ಯ ತಿಳಿಸಿದ್ದಾರೆ. ಆಪಾದಿತರು ನಕಲಿ ದಸ್ತಾವೇಜು ಪತ್ರಗಳನ್ನು ಸೃಷ್ಟಿಸಿ ವಂಚಿಸಿರುವುದು ಸ್ಪಷ್ಟವಾಗಿದೆ. ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಸರಕಾರಿ ಅಧಿಕಾರಿಗಳು, ರಾಜಕಾರಣಿಗಳು- ಹೀಗೆ ಲಂಚದ ಆಮಿಷ ತೋರಿಸಿ ಒಂದು ವ್ಯವಸ್ಥಿತ ಜಾಲವನ್ನು ಇವರು ನಿರ್ಮಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಲಂಚ ಪಡೆದ ಆರೋಪಿ , ಬಂಧಿತ ಸರಕಾರಿ ಅಧಿಕಾರಿ ಶ್ರೀನಿವಾಸ ರಾವ್ ಈ ಹಣದಿಂದ ಅಂತಾರಾಷ್ಟ್ರೀಯ ಪ್ರವಾಸ ಮಾಡಿರುವುದು ಬೆಳಕಿಗೆ ಬಂದಿದೆ ಎಂದವರು ತಿಳಿಸಿದ್ದಾರೆ.







