ಮದ್ರಾಸ್ ಐಐಟಿ: ‘ಬೀಫ್ ಫೆಸ್ಟ್’ನಲ್ಲಿ ಪಾಲ್ಗೊಂಡ ಪಿಎಚ್‌ಡಿ ವಿದ್ಯಾರ್ಥಿಗೆ ಮಾರಣಾಂತಿಕ ಹಲ್ಲೆ

ಚೆನ್ನೈ, ಮೇ 30: ರವಿವಾರ ಮದ್ರಾಸ್‌ನ ಐಐಟಿಯಲ್ಲಿ ಆಯೋಜಿಸಲಾಗಿದ್ದ ‘ಬೀಫ್ ಫೆಸ್ಟ್’ (ಗೋಮಾಂಸ ಹಬ್ಬ)ನಲ್ಲಿ ಪಾಲ್ಗೊಂಡ ಪಿಎಚ್‌ಡಿ ವಿದ್ಯಾರ್ಥಿಯೋರ್ವನ ಮೇಲೆ ಬಲಪಂಥೀಯ ವಿದ್ಯಾರ್ಥಿಗಳು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಅಂಬೇಡ್ಕರ್ ಪೆರಿಯರ್ ಸ್ಟಡಿ ಸರ್ಕಲ್ ಎಂಬ ದಲಿತ ವಿದ್ಯಾರ್ಥಿ ಸಂಘಟನೆಯ ಸದಸ್ಯ , ಐಐಟಿ ಮದ್ರಾಸ್‌ನ ಪಿಎಚ್‌ಡಿ ವಿದ್ಯಾರ್ಥಿ ಸೂರಜ್ ಆರ್. ಎಂಬಾತ ಹಲ್ಲೆಗೊಳಗಾದ ವಿದ್ಯಾರ್ಥಿ. ಸಂಸ್ಥೆಯ ಆವರಣದಲ್ಲಿರುವ ಕ್ಯಾಂಟೀನ್‌ನಲ್ಲಿ ರವಿವಾರ ಅಪರಾಹ್ನ ಸುಮಾರು 2 ಗಂಟೆ ವೇಳೆ ಈ ಘಟನೆ ನಡೆದಿದೆ. ಐಐಟಿ ವಿದ್ಯಾರ್ಥಿ ಮನೀಷ್ ಎಂಬಾತನ ಜೊತೆ ಬಂದ ಎಂಟು ವಿದ್ಯಾರ್ಥಿಗಳು ಸೂರಜ್‌ನ ಬಳಿ ತೆರಳಿ ಆತನ ಹೆಸರೇನೆಂದು ವಿಚಾರಿಸಿದ್ದಾರೆ. ಸೂರಜ್ ತನ್ನ ಹೆಸರು ತಿಳಿಸಿದೊಡನೆ ಆತನ ಮೇಲೆ ಹಲ್ಲೆ ಆರಂಭಿಸಿದ್ದಾರೆ. ಹಲ್ಲೆಯಿಂದ ಸೂರಜ್‌ನ ಮೂಗಿನಿಂದ ರಕ್ತ ಸುರಿಯತೊಡಗಿತು ಮತ್ತು ಬಲಗಣ್ಣು ಊದಿಕೊಂಡಿದೆ. ಸೂರಜ್ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ಗೋಮಾಂಸ ಹಬ್ಬದಲ್ಲಿ ಪಾಲ್ಗೊಂಡಿದ್ದ. ಆದರೆ ಆತ ಇದನ್ನು ಆಯೋಜಿಸಿದ್ದ ಎಂದುಕೊಂಡು ಈ ಹಲ್ಲೆ ನಡೆಸಲಾಗಿದೆ ಎಂದು ವಿದ್ಯಾರ್ಥಿಯೋರ್ವ ತಿಳಿಸಿದ್ದಾನೆ.
ಐಐಟಿ ಗೋಮಾಂಸ ಹಬ್ಬದಲ್ಲಿ ಒಳಗೊಂಡಿರುವ ಎಲ್ಲಾ ವಿದ್ಯಾರ್ಥಿಗಳ ಪಟ್ಟಿ ತಮ್ಮಲ್ಲಿದೆ ಎಂದು ಈ ತಂಡ ಬೆದರಿಸಿದೆ ಎನ್ನಲಾಗಿದೆ. ಇನ್ನೋರ್ವ ಪಿಎಚ್‌ಡಿ ವಿದ್ಯಾರ್ಥಿಗೆ ಜೀವ ಬೆದರಿಕೆ ಒಡ್ಡಿದ ಬಗ್ಗೆ ಮನೀಷ್ ವಿರುದ್ಧ ಈ ಹಿಂದೊಮ್ಮೆ ಕೇಸು ದಾಖಲಾಗಿತ್ತು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಇದೀಗ ಸಂಸ್ಥೆಯ ಡೀನ್ ಮತ್ತು ಭದ್ರತಾ ವಿಭಾಗದಲ್ಲಿ ಆತನ ವಿರುದ್ಧ ಮತ್ತೊಂದು ಕೇಸು ದಾಖಲಾಗಿದೆ. ಜೂನ್ 2ರವರೆಗೆ ಸಂಸ್ಥೆ ಮುಚ್ಚಿರುವ ಕಾರಣ ಈ ಬಗ್ಗೆ ತಮಗೇನೂ ತಿಳಿಯದು ಎಂದು ಐಐಟಿಯ ವಕ್ತಾರರು ಪ್ರತಿಕ್ರಿಯಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಗಾಗಿ ಜಾನುವಾರು ಮಾರಾಟವನ್ನು ನಿಷೇಧಿಸಿರುವ ಕೇಂದ್ರ ಸರಕಾರದ ಹೊಸ ಕಾನೂನನ್ನು ವಿರೋಧಿಸಿ ಐಐಟಿ ಮದ್ರಾಸ್‌ನ ವಿದ್ಯಾರ್ಥಿಗಳು ರವಿವಾರ ರಾತ್ರಿ ‘ಬೀಫ್ ಫೆಸ್ಟ್’ ಆಯೋಜಿಸಿದ್ದರು. ಸುಮಾರು 70 ಮಂದಿ ವಿದ್ಯಾರ್ಥಿಗಳು ಗೋಮಾಂಸ ಸೇವಿಸುವ ವಿಡಿಯೋ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಖಂಡಿಸಿದ್ದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಎಚ್.ರಾಜ, ಘಟನೆಯಲ್ಲಿ ಪಾಲ್ಗೊಂಡ ಐಐಟಿ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲು ಆಗ್ರಹಿಸಿದ್ದರು.







