ಮಲಪ್ಪುರಂ: ದೇಗುಲ ಹಾನಿ ಪ್ರಕರಣ; ಆರೋಪಿ ಬಂಧನ
ಕೋಮುಗಲಭೆಯ ಕಿಡಿ ಹಚ್ಚುವ ಸಂಚು ವಿಫಲ

ಮಲಪ್ಪುರಂ,ಮೇ 30: ದೇವಾಲಯದ ವಿಗ್ರಹಗಳಿಗೆ ಹಾನಿ ಮಾಡಿದ ಘಟನೆಯ ಹಿನ್ನೆಲೆಯಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಕೋಮುಗಲಭೆಯ ಕಿಡಿ ಹಚ್ಚುವ ಸಂಚನ್ನು ಕೇರಳ ಪೊಲೀಸರು ವಿಫಲಗೊಳಿಸಿದ್ದಾರೆ. ಶುಕ್ರವಾರ ರಾತ್ರಿ ಮಲ್ಲಪ್ಪುರಂನ ನೀಲಂಬೂರು ಸಮೀಪದ ಪೂಕೊಟ್ಟುಂಪಡಂ ಎಂಬಲ್ಲಿ ಶಿವದೇಗುಲದ ಗರ್ಭಗುಡಿಗಳಲ್ಲಿರುವ ವಿಗ್ರಹಗಳನ್ನು ಭಗ್ನಗೊಳಿಸಲಾಗಿತ್ತು. ಈ ಘಟನೆಯನ್ನು ಖಂಡಿಸಿ ಹಿಂದೂ ಐಕ್ಯವೇದಿ ಮತ್ತಿತರ ಸಂಘಪರಿವಾರದ ಸಂಘಟನೆಗಳು ಹರತಾಳಕ್ಕೆ ಕರೆ ನೀಡಿದ್ದವು. ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಲು ಆಗಮಿಸಿದ ಮಾಜಿ ಕಾಂಗ್ರೆಸ್ ಶಾಸಕ ಆರ್ಯಾಡನ್ ಮುಹಮ್ಮದ್ ಅವರನ್ನು ಪ್ರತಿಭಟನಕಾರರು ತಡೆದಿದ್ದರು. ದೇಗುಲ ಅಪವಿತ್ರದ ಘಟನೆಯ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿಯೂ ಕೋಮುದ್ವೇಷವನ್ನು ಹರಡುವ ಸಂದೇಶಗಳನ್ನು ವ್ಯಾಪಕವಾಗಿ ಪ್ರಸಾರ ಮಾಡಲಾಗಿದ್ದು, ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಿತ್ತು.
ಶಿವ ದೇವಾಲಯದ ಅಪವಿತ್ರ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ರವಿವಾರ ತಿರುವನಂತಪುರದ ಕಲಿಮನೂರ್ ನಿವಾಸಿ ಮೋಹನ್ ಕುಮಾರ್‌ಎಸ್.ಎಸ್. ಎಂಬಾತನನ್ನು ಬಂಧಿಸಿದ್ದಾರೆ. ಕ್ರಿಮಿನಲ್ ಹಿನ್ನೆಲೆಯ ಮೋಹನ್‌ಕುಮಾರ್ ಈ ಹಿಂದೆ ಕೊಲೆ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿರುವುದಾಗಿ ತಿಳಿದುಬಂದಿದೆ.
ಮೋಹನ್‌ಕುಮಾರ್‌ನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದು, ಆತ ತನ್ನ ಧರ್ಮದಲ್ಲಿರುವ ಕೆಟ್ಟಸಂಪ್ರದಾಯಗಳನ್ನು ಪ್ರತಿಭಟನೆಯಾಗಿ ಈ ಕೃತ್ಯವನ್ನೆಸಗಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಈ ಮೊದಲು ಆತ ನೀಲಂಬೂರ್ ಸಮೀಪದ ವನಿಯಂಬಂನ ದೇಗುಲಕ್ಕೂ ಇದೇ ರೀತಿ ಹಾನಿ ಮಾಡಿರುವುದಾಗಿ ತಿಳಿದುಬಂದಿದೆ.







