ಹಂದಿಮಾಂಸದ ಸೇವನೆ: ಮೂವರು ಮೃತ್ಯು, 100ಕ್ಕೂ ಅಧಿಕ ಮಂದಿ ಅಸ್ವಸ್ಥ

ಶಿಲ್ಲಾಂಗ್,ಮೇ 30: ಮೇಘಾಲಯದಲ್ಲಿ ಸ್ಥಳೀಯ ಚರ್ಚ್ ಉತ್ಸವದಲ್ಲಿ ಹಂದಿ ಮಾಂಸದ ಭೋಜನ ಸೇವಿಸಿದ ಬಳಿಕ ಅಪ್ರಾಪ್ತ ವಯಸ್ಸಿನ ಬಾಲಕ ಸೇರಿದಂತೆ ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಹಾಗೂ 100ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ.
ರಿ ಭೋಯ್ ಜಿಲ್ಲೆಯ ನೊಂಗ್‌ಕ್ಯಾ ಗ್ರಾಮದ ಚರ್ಚ್ ಒಂದರಲ್ಲಿ ರವಿವಾರ ನಡೆದ ಉತ್ಸವದಲ್ಲಿ ನೂರಾರು ಮಂದಿ ಹಂದಿಮಾಂಸದ ಭೋಜನ ಸೇವಿಸಿದ್ದರು. ಆ ಬಳಿಕ ಅವರಲ್ಲಿ ಹಲವರು ಅಸ್ವಸ್ಥಗೊಂಡು, ಅಸ್ಪತ್ರೆಗೆ ದಾಖಲಾಗಿದ್ದರು.
ಏಳು ವರ್ಷದ ಓರ್ವ ಬಾಲಕ ಸೇರಿದಂತೆ ಇಬ್ಬರು ಸ್ಥಳೀಯ ಸಾಮುದಾಯಿಕ ಆಸ್ಪತ್ರೆಯಲ್ಲಿ ರವಿವಾರ ಸಂಜೆ ಕೊನೆಯುಸಿರೆಳೆದಿದ್ದರು. ಗಂಭೀರವಾಗಿ ಅಸ್ವಸ್ಥಗೊಂಡು, ಶಿಲ್ಲಾಂಗ್‌ನ ಸಿವಿಲ್ ಆಸ್ಪತ್ರೆಗೆ ದಾಖಲಾಗಿದ್ದ ಇನ್ನೋರ್ವ ವ್ಯಕ್ತಿ ಶಿಲ್ಲಾಂಗ್ ಸಿವಿಲ್ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆಂದು ಮೂಲಗಳು ತಿಳಿಸಿವೆ.
55 ಮಂದಿ ತೀವ್ರವಾಗಿ ಅಸ್ವಸ್ಥರಾಗಿದ್ದು, ಅವರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಯೆಂದು ಮೂಲಗಳು ತಿಳಿಸಿವೆ.
Next Story





