ಒಂದೇ ಕಾಮಗಾರಿಗೆ ಎರಡು ಬಾರಿ ಶಿಲಾನ್ಯಾಸ!
ಅಭಿವೃದ್ದಿ ಹೆಸರಿನ ಕ್ರೆಡಿಟ್‌ಗಾಗಿ ರಾಜಕೀಯ ಪಕ್ಷಗಳ ನಡುವೆ ಜಿದ್ದಾ ಜಿದ್ದಿ

ಕಾರ್ಕಳ, ಮೇ 30: ಕಾರ್ಕಳ ಪುರಸಭೆ ವ್ಯಾಪ್ತಿಯನ ಪ್ರವಾಸಿ ಬಂಗಲೆಗೆ ಸಂಬಂಧಿಸಿದ ನೂತನ ವಸತಿ ಗೃಹ ನಿರ್ಮಾಣ ಕಾಮಗಾರಿಗೆ ರಾಜ್ಯ ಸರಕಾರವು 1.50 ಕೋಟಿ ರೂ. ಬಿಡುಗಡೆಗೊಳಿಸಿದ್ದು, ಅದರ ಶಿಲಾನ್ಯಾಸ ಕಾರ್ಯಕ್ರಮ ನಡೆದಿದೆ.
ಇದೇ ವಿಚಾರಕ್ಕಾಗಿ ಕಾರ್ಕಳ ಶಾಸಕರು ಶಿಷ್ಟಾಚಾರ ಉಲ್ಲಂಘಿಸಿ ಶಿಲಾನ್ಯಾಸ ನೆರವೇರುವ ಮೂಲಕ ಜನಪ್ರತಿನಿಧಿಯನ್ನು ಕಡೆಗಣಿಸಿದ್ದಾರೆ ಎಂದು ಶುಭುದ್ ರಾವ್ ಆರೋಪಿಸಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ವತಿಯಿಂದ ಎರಡೆನೆ ಬಾರಿ ಶಿಲಾನ್ಯಾಸ ನೆರವೇರಿಸಿ ಘಟನೆ ನಡೆದಿದೆ.
ಎರಡನೆ ಬಾರಿ ಶಿಲಾನ್ಯಾಸ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಶಾಸಕರು ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ಅನುಸರಿಸಿ ಶಂಕು ಸ್ಥಾಪನೆ ನಡೆಸಿದ್ದಾರೆ. ಸರಕಾರದ ಕಾರ್ಯ ಕ್ರಮವನ್ನು ಬಿಜೆಪಿ ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಿರುವುದು ಖಂಡನಾರ್ಹ ಸಂಗತಿ .ಶಾಸಕರ ಈ ನಡೆಯು ಹೀಗೇ ಮುಂದುವರಿದರೆ ಕಪ್ಪು ಬಾವುಟ ಹಿಡಿದು ಪ್ರತಿಭಟಿಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಷಯ್ ರಾವ್, ಸದಸ್ಯರಾದ ಸಭೀತ್ ಕುಮಾರ್, ಶುಭದ್ ರಾವ್, ವಿನ್ನಿಬೋಲ್ದ್, ಸೀತಾರಾಮ್, ಮೊಹಮ್ಮದ್ ಶರೀಫ್, ಪ್ರಿಯಾ, ನವೀನ್ ದೇವಾಡಿಗ, ವಿವೇಕಾನಂದ ಶೆಣೈ, ವಂದನಾ, ಪ್ರತಿಮಾ, ಶ್ರೀಧರ್ ದೇವಾಡಿಗ, ಸುನೀಲ್ ಕೋಟ್ಯಾನ್ ಭಾಗವಹಿಸಿದ್ದರು.
ಬಿಜೆಪಿ ಶಿಲಾನ್ಯಾಸ :
ನೂತನ ವಸತಿ ಗೃಹ ನಿರ್ಮಾಣ ಕಾಮಗಾರಿಗೆ ಕಾರ್ಕಳ ಕ್ಷೇತ್ರ ಶಾಸಕರು ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕ ವಿ. ಸುನಿಲ್ ಕುಮಾರ್ ಮಂಗಳವಾರ ಶಿಲಾನ್ಯಾಸ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ವಿ.ಸುನಿಲ್ ಕುಮಾರ್, ಈಗಾಗಲೇ ಹಳೆಯ ಒಂದೇ ವಸತಿ ಗೃಹವಿದ್ದು, ಒಂದು ನೂತನ ವಸತಿ ಗೃಹ ನಿರ್ಮಾಣ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದು, ಇದೀಗ ನೂತನ ವಸತಿ ಗೃಹ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಂಡಿದೆ ಎಂದರು.
ನಿರ್ಮಾಣಗೊಳ್ಳಲಿರುವ ನೂತನ ವಸತಿ ಗೃಹದಲ್ಲಿ ಒಂದು ವಿವಿಐಪಿ ಹಾಗೂ ಒಂದು ವಿಐಪಿ ಕೋಣೆಗಳು ಇರಲಿದ್ದು, ಉಳಿದಂತೆ ಸುಸಜ್ಜಿತ ಅಡುಗೆ ಕೋಣೆ, ಡೈನಿಂಗ್ ರೂಂ, ಪಾರ್ಟಿ ಹಾಲ್, ಸ್ಟೋರ್ ರೂಂ ಇರಲಿದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ತಾ.ಪಂ. ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಪುರಸಭೆ ಅಧ್ಯಕ್ಷೆ ಅನಿತಾ ಆರ್. ಅಂಚನ್, ಉಪಾಧ್ಯಕ್ಷ ಗಿರಿಧರ್ ನಾಯಕ್, ಪುರಸಭೆ ಸದಸ್ಯರಾದ ಪ್ರಕಾಶ್ ರಾವ್, ಪಾರ್ಶ್ವನಾಥ್ ವರ್ಮ, ಹಿರಿಯ ನ್ಯಾಯವಾದಿಗಳಾದ ಎಂ.ಕೆ ವಿಜಯ ಕುಮಾರ್, ಹಿರಿಯ ಮುಖಂಡ ಬೋಳ ಪ್ರಭಾಕರ್ ಕಾಮತ್, ಪುರಸಭೆ ಕಾರ್ಯಾಲಯ ವ್ಯವಸ್ಥಾಪಕ ಮಂಜುನಾಥ ಕೆ.ಎಸ್. ಸುಭಾಶ್ ಹೆಗ್ಡೆ, ಚೇತನ್ ನಾಯಕ್, ಶಿವಾನಂದ್, ಉದ್ಯಮಿಗಳಾದ ವಿಜಯ ಶೆಟ್ಟಿ, ನಗರ ಬಿಜೆಪಿ ಅಧ್ಯಕ್ಷ ಅನಂತಕೃಷ್ಣ ಶೆಣೈ, ಕಾರ್ಯದರ್ಶಿ ಅಶೋಕ್ ಸುವರ್ಣ, ಗುತ್ತಿಗೆದಾರ ಸುಜಯ ಶೆಟ್ಟಿ ಉಪಸ್ಥಿತರಿದ್ದರು.
ಕಾಂಗ್ರೆಸ್ ಶಿಲಾನ್ಯಾಸ:
ಕಾಂಗ್ರೆಸ್ ಪುರಸಭೆ ಸದಸ್ಯರಿಗೆ ಆಹ್ವಾನವಿಲ್ಲ ಎನ್ನುವ ಕಾರಣಕ್ಕೆ ಇದೇ ಕಾಮಗಾರಿಗೆ ಪುರಸಭೆ ಇನ್ನೊಂದು ಬಾರಿ ಶಿಲಾನ್ಯಾಸ ನೆರವೇರಿಸಿದರು.
ಪುರಸಭೆ ಸದಸ್ಯರಾದ ಸೀತಾರಾಮ, ಅಕ್ಷಯ ರಾವ್, ಶುಭದ ರಾವ್, ಸುನಿಲ್ ಕೋಟ್ಯಾನ್, ವಂದನ ಜತ್ತನ್ನ, ವಿವೇಕಾನಂದ ಶೆಣೈ, ನವೀನ್ ದೇವಾಡಿಗ, ಪ್ರತಿಮಾ ಮೋಹನ್, ಮುಹಮ್ಮದ್ ಶರೀಫ್, ವಿನ್ನಿ ಬೋಲ್ಡ್ ಮೆಂಡೋನ್ಸಾ ಮತ್ತು ಪ್ರಿಯಾ ರಾಜೇಂದ್ರ ಉಪಸ್ಥಿತರಿದ್ದರು.







