ಬಾಂಗ್ಲಾಕ್ಕೆ ಅಪ್ಪಳಿಸಿದ ಚಂಡಮಾರುತ

ಢಾಕಾ (ಬಾಂಗ್ಲಾದೇಶ), ಮೇ 30: ‘ಮೊರ’ ಚಂಡಮಾರುತ ಮಂಗಳವಾರ ಬಾಂಗ್ಲಾದೇಶಕ್ಕೆ ಅಪ್ಪಳಿಸಿದ್ದು ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ. ಗಂಟೆಗೆ 150 ಕಿಲೋಮೀಟರ್‌ಗೂ ಅಧಿಕ ವೇಗದ ಗಾಳಿ ಅಪ್ಪಳಿಸಿದ್ದು, ನೂರಾರು ಮನೆಗಳು ನೆಲಸಮವಾಗಿವೆ.
ಇದಕ್ಕೂ ಮುನ್ನ ಅಧಿಕಾರಿಗಳು ದೇಶದ ಕರಾವಳಿ ಪ್ರದೇಶಗಳಿಂದ 5 ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿದರು.
ತೀವ್ರ ಚಂಡಮಾರುತ ‘ಮೊರ’ ಉತ್ತರದ ಕೊಲ್ಲಿಯಿಂದಾಗಿ ಉತ್ತರಕ್ಕೆ ಚಲಿಸಿದೆ ಹಾಗೂ ಮಂಗಳವಾರ ಬೆಳಗ್ಗೆ ಆರು ಗಂಟೆಗೆ ಕಾಕ್ಸ್ ಬಝಾರ್-ಚಿತ್ತಗಾಂಗ್ ಕರಾವಳಿಯನ್ನು ದಾಟಿದೆ ಎಂದು ವಿಶೇಷ ಪ್ರಕಟನೆಯೊಂದರಲ್ಲಿ ಬಾಂಗ್ಲಾದೇಶ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಓರ್ವ ವ್ಯಕ್ತಿ ಬಿರುಗಾಳಿ ಬೀಸುವ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಹಾಗೂ ಇತರರು ಉರುಳಿದ ಮರಗಳು ಮತ್ತು ಮನೆಗಳ ಅಡಿಗೆ ಸಿಲುಕಿ ಪ್ರಾಣ ಕಳೆದುಕೊಂಡರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ನಾರ್ತ್ ಬೇ ಮತ್ತು ಬಾಂಗ್ಲಾದೇಶದ ಕರಾವಳಿ ಜಿಲ್ಲೆಗಳಲ್ಲಿ ಪ್ರದೇಶದಲ್ಲಿ ಬಿರುಗಾಳಿಯಿಂದ ಕೂಡಿದ ಧಾರಕಾರ ಮಳೆಯಾಗುತ್ತಿದೆ.
ಚಿತ್ತಗಾಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಕಾಕ್ಸ್ ಬಝಾರ್ ವಿಮಾನ ನಿಲ್ದಾಣಗಳ ಎಲ್ಲ ವಿಮಾನ ಸೇವೆಗಳನ್ನು ನಿಲ್ಲಿಸಲಾಗಿದೆ.







