ಕುಂದಾಪುರದಲ್ಲಿ ಭಾರೀ ಗಾಳಿ-ಮಳೆ: ಮನೆ ಮೇಲೆ ಮರ ಬಿದ್ದು ಹಾನಿ
ಉಡುಪಿ, ಮೇ 30: ಇಂದು ಸಂಜೆ ಜಿಲ್ಲೆಯಾದ್ಯಂತ ಗಾಳಿಯೊಂದಿಗೆ ಮಳೆ ಸುರಿದಿದೆ. ನಿನ್ನೆ ರಾತ್ರಿ ಸಹ ಮಳೆ ಸುರಿದ್ದಿದ್ದು, ಇದರಿಂದ ಸೆಕೆಯಿಂದ ಬಸವಳಿದಿದ್ದ ಜನತೆಗೆ ತಂಪಿನ ಸಿಂಚನವಾಗಿದೆ. ಆದರೆ ನಿನ್ನೆ ರಾತ್ರಿ ಮಳೆಯೊಂದಿಗೆ ವಿದ್ಯುತ್ ಸಹ ಕೈಕೊಟ್ಟಿದ್ದು, ಉಡುಪಿ, ಕುಂದಾಪುರ ಸೇರಿದಂತೆ ಅನೇಕ ಕಡೆಗಳಲ್ಲಿ ಇಂದು ಸಂಜೆಯವರೆಗೂ ವಿದ್ಯುತ್ ಇರಲಿಲ್ಲ.
ಇಂದು ಸಂಜೆ ಐದು ಗಂಟೆ ಸುಮಾರಿಗೆ ಬೀಸಿದ ಭಾರೀ ಗಾಳಿಗೆ ಕುಂದಾಪುರದ ಖಾರ್ವಿಕೇರಿಯ ಪಂಚಗಂಗಾವಳಿ ನದಿಯಲ್ಲಿ ನಿಲ್ಲಿಸಿದ್ದ ಮೀನುಗಾರಿಕಾ ದೋಣಿಗಳು ಅದರೊಳಗಿದ್ದ ಬಲೆಯೊಂದಿಗೆ ನೀರಿನಲ್ಲಿ ಮುಳುಗತೊಡಗಿದ್ದು, ಕೂಡಲೇ ಧಾವಿಸಿ ಬಂದ ಮೀನುಗಾರರನ್ನು ಅವುಗಳನ್ನು ಸುರಕ್ಷಿತವಾಗಿ ದಡಕ್ಕೆ ತರುವಲ್ಲಿ ಯಶಸ್ವಿಯಾದರು.
ಆನಗಳ್ಳಿಯ 2ನೇ ವಾರ್ಡ್ ಕೊಪ್ಪಲಿನಲ್ಲಿ ರಾಧಾ ಮೊಗವೀರ ಎಂಬವರ ಮನೆಯ ಮೇಲೆ ಸಂಜೆ 5:45ರ ಸುಮಾರಿಗೆ ಭಾರೀ ಗಾತ್ರ ಹಲಸಿನ ಮರ ಬಿದ್ದಿದ್ದು ಅಪಾರ ಹಾನಿ ಸಂಭವಿಸಿದೆ. ಆದರೆ ನಷ್ಟದ ಅಂದಾಜು ಇನ್ನಷ್ಟೇ ನಡೆಯಬೇಕಿದೆ.
ಅದೇ ರೀತಿ ಕುಂದಾಪುರ ಕಸ್ಬಾದಲ್ಲಿ ಚಂದ್ರ ಖಾರ್ವಿ ಎಂಬವರ ಮನೆ ಮೇಲೆ ತೆಂಗಿನಮರ ಬಿದ್ದಿದ್ದು, ಮನೆಗೆ ಭಾಗಶ: ಹಾನಿಯಾಗಿದೆ. ಇದರಿಂದ ಸುಮಾರು 10,000ರೂ. ನಷ್ಟವಾಗಿರುವ ಅಂದಾಜು ಮಾಡಲಾಗಿದೆ.
ಇಂದು ಬೆಳಗ್ಗೆ ಎಂಟು ಗಂಟೆಗೆ ಮುಕ್ತಾಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 39.26ಮಿ.ಮೀ. ಮಳೆ ಸುರಿದಿದೆ. ಉಡುಪಿಯಲ್ಲಿ 58.6ಮಿ.ಮೀ., ಕಾರ್ಕಳದಲ್ಲಿ 33.2 ಹಾಗೂ ಕುಂದಾಪುರದಲ್ಲಿ 26.0ಮಿ.ಮೀ. ಮಳೆಯಾದ ಬಗ್ಗೆ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.







