ಉಡುಪಿ: ಮೆಡಿಕಲ್ ಶಾಪ್‌ಗಳು ಬಂದ್
ಉಡುಪಿ, ಮೇ 30: ಔಷಧ ಮಾರಾಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಹೇರಿರುವ ನಿರ್ಬಂಧ, ಆನ್‌ಲೈನ್‌ನಲ್ಲಿ ಔಷಧ ಮಾರಾಟವನ್ನು ವಿರೋಧಿಸಿ ದೇಶಾದ್ಯಂತ ಔಷಧ ಮಾರಾಟ ಮಳಿಗೆಗಳು ಇಂದು ಕರೆ ನೀಡಿದ ಒಂದು ದಿನದ ಬಂದ್‌ನಲ್ಲಿ ಉಡುಪಿ ಜಿಲ್ಲೆಯ ಮೆಡಿಕಲ್ ಶಾಪ್‌ಗಳೂ ಭಾಗವಹಿಸಿದ್ದವು.
ಆಸ್ಪತ್ರೆಯೊಳಗೆ ಕಾರ್ಯಾಚರಿಸುವ ಮೆಡಿಕಲ್ ಶಾಪ್‌ಗಳನ್ನು ಹೊರತು ಪಡಿಸಿ ಉಳಿದಂತೆ ಜಿಲ್ಲೆಯ ಎಲ್ಲಾ ಮೆಡಿಕಲ್ ಶಾಪ್‌ಗಳು 29ರ ರಾತ್ರಿ 12 ಗಂಟೆಯಿಂದ 30ರ ರಾತ್ರಿ 12ಗಂಟೆಯವರೆಗೆ ಬಾಗಿಲು ತೆರೆಯದೇ ಬಂದ್‌ನಲ್ಲಿ ಪಾಲ್ಗೊಂಡವು. ಅಜ್ಜರಕಾಡಿನ ಜಿಲ್ಲಾಸ್ಪತ್ರೆ, ಉಡುಪಿಯ ಆದರ್ಶ್, ಗಾಂಧಿ, ಡಾ.ಟಿಎಂಎ ಪೈ, ಮಣಿಪಾಲದ ಕೆಎಂಸಿ ಆಸ್ಪತ್ರೆ ಮುಂತಾದ ಖಾಸಗಿ ಆಸ್ಪತ್ರೆಗಳಿಗೆ ಸಂಬಂಧಿಸಿದ ಔಷಧ ಅಂಗಡಿಗಳು ಮಾತ್ರ ಎಂದಿನಂತೆ ಕಾರ್ಯಾಚರಿಸಿದವು.
ಉಡುಪಿ ಜಿಲ್ಲೆಯಲ್ಲಿದ್ದ ಸುಮಾರು 400ಕ್ಕೂ ಅಧಿಕ ಮೆಡಿಕಲ್ ಸ್ಟೋರ್‌ಗಳು ಇಂದಿನ ಯಶಸ್ವಿ ಬಂದ್‌ನಲ್ಲಿ ಭಾಗವಹಿಸಿದವು ಎಂದು ಸಂಘಟನೆ ಪದಾಧಿಕಾರಿಗಳು ತಿಳಿಸಿದರು.
ಹೊಟೇಲ್ ಬಂದ್ ಇಲ್ಲ: ಜಿಎಸ್‌ಟಿ ವಿರೋಧಿಸಿ ಹೊಟೇಲ್ ಮಾಲಕರು ಕರೆ ನೀಡಿದ ಬಂದ್‌ನಲ್ಲಿ ಉಡುಪಿ ಜಿಲ್ಲೆಯ ಹೊಟೇಲ್‌ಗಳು ಭಾಗವಹಿಸಲಿಲ್ಲ. ಜಿಲ್ಲೆಯ ಎಲ್ಲಾ ಹೊಟೇಲ್‌ಗಳು ಎಂದಿನಂತೆ ತೆರೆದಿದ್ದು, ಗ್ರಾಹಕರಿಗೆ ತಮ್ಮ ಸೇವೆಯನ್ನು ಒದಗಿಸಿದವು.