ಬಾಂಗ್ಲಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಚಾಂಪಿಯನ್ಸ್ ಟ್ರೋಫಿ: ಎರಡನೆ ಅಭ್ಯಾಸ ಪಂದ್ಯ

ಲಂಡನ್, ಮೇ 30: ಇಲ್ಲಿನ ಕೆನಿಂಗ್ಟನ್ ಓವಲ್‌ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ಭಾರತ 240 ರನ್‌ಗಳ ಭರ್ಜರಿ ಜಯ ಗಳಿಸಿದೆ.
ಗೆಲುವಿಗೆ 325 ರನ್‌ಗಳ ಸವಾಲನ್ನು ಪಡೆದ ಬಾಂಗ್ಲಾದೇಶ ತಂಡ ಭಾರತದ ವೇಗದ ಬೌಲಿಂಗ್ ದಾಳಿಗೆ ಸಿಲುಕಿ 23.5 ಓವರ್‌ಗಳಲ್ಲಿ 84 ರನ್‌ಗಳಿಗೆ ಆಲೌಟಾಗಿದೆ. ಭಾರತ ಇದರೊಂದಿಗೆ ಸತತ ಎರಡು ಅಭ್ಯಾಸ ಪಂದ್ಯಗಳಲ್ಲಿ ಜಯ ಗಳಿಸಿದೆ.
ಕಳೆದ ಪಂದ್ಯದಲ್ಲಿ ಭಾರತ ನ್ಯೂಝಿಲೆಂಡ್ ವಿರುದ್ಧ 45 ರನ್ ಅಂತರದಲ್ಲಿ ಜಯ ಗಳಿಸಿತ್ತು. ಇದೀಗ ಎರಡನೆ ಜಯ ಸಾಧಿಸಿದೆ.
ಬಾಂಗ್ಲಾ ತಂಡದ ಪರ ಮೆಹಾದಿ ಹಸನ್ ಮಿರಾಝ್(24) ಗಳಿಸಿರುವುದು ತಂಡದ ಪರ ದಾಖಲಾದ ಗರಿಷ್ಠ ಸ್ಕೋರ್. ಭುವನೇಶ್ವರ ಕುಮಾರ್(13ಕ್ಕೆ 3) ಮತ್ತು ಉಮೇಶ್ ಯಾದವ್(16ಕ್ಕೆ3) ದಾಳಿಯನ್ನು ಎದುರಿಸಲಾರದೆ ಬಾಂಗ್ಲಾದ ದಾಂಡಿಗರು ಬೇಗನೆ ಪೆವಿಲಿಯನ್ ಸೇರಿದರು.
ಮಶ್ಫಿಕುರ್ರಹೀಂ (13), ಸುನಾಝುನುಲ್ ಇಸ್ಲಾಂ(18) ಎರಡಂಕೆಯ ಸ್ಕೋರ್ ದಾಖಲಿಸಿದರು. ಬಾಂಗ್ಲಾ ತಂಡ 22 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತು.
ಶಬೀರ್ ರಹ್ಮಾನ್(0), ಮಹ್ಮುದುಲ್ಲಾ(0) ಮತ್ತು ಮೊಸಾಡೆಕ್ ಹುಸೈನ್(0) ಮತ್ತು ರುಬೆಲ್ ಹುಸೈನ್(0) ಸೊನ್ನೆ ಸುತ್ತಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 324 ರನ್ ಗಳಿಸಿತು. 6 ಓವರ್‌ಗಳಲ್ಲಿ 21 ರನ್ ಗಳಿಸುವಷ್ಟರಲ್ಲಿ ಭಾರತ 2 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ರೋಹಿತ್ ಶರ್ಮ(1) ಮತ್ತು ಅಜಿಂಕ್ಯ ರಹಾನೆ(11) ವಿಫಲರಾದರು. ಮೂರನೆ ವಿಕೆಟ್‌ಗೆ ಶಿಖರ್ ಧವನ್ ಮತ್ತು ದಿನೇಶ್ ಕಾರ್ತಿಕ್ 100 ರನ್‌ಗಳ ಜೊತೆಯಾಟ ನೀಡಿದರು.ಧವನ್(60) ಅರ್ಧಶತಕ ದಾಖಲಿಸಿದರು. ದಿನೇಶ್ ಕಾರ್ತಿಕ್ ಶತಕದ ಕಡೆಗೆ ಹೆಜ್ಜೆ ಇರಿಸಿದ್ದರೂ 94 ರನ್ ಗಳಿಸಿ ಗಾಯಾಳುವಾಗಿ ಪಂದ್ಯದಿಂದ ನಿವೃತ್ತರಾದರು.
ಹಾರ್ದಿಕ್ ಪಾಂಡ್ಯ ಔಟಾಗದೆ 80 ರನ್(54ಎ, 6ಬೌ,4ಸಿ) ಗಳಿಸಿದರು.ಜಡೇಜ 32 ರನ್ ಸೇರಿಸಿದರು. ಬಾಂಗ್ಲಾದ ರುಬೆಲ್ 50ಕ್ಕೆ 3 ಮತ್ತು ಸುಂಝಾಮುಲ್ ಇಸ್ಲಾಂ 74ಕ್ಕೆ 2 ವಿಕೆಟ್ ಹಂಚಿಕೊಂಡರು.
ಸಂಕ್ಷಿಪ್ತ ಸ್ಕೋರ್ ವಿವರ
ಭಾರತ 50 ಓವರ್‌ಗಳಲ್ಲಿ 324/7(ಕಾರ್ತಿಕ್ ಗಾಯಾಳು ನಿವೃತ್ತಿ 94, ಹಾರ್ದಿಕ್ ಪಾಂಡ್ಯ ಔಟಾಗದೆ 80, ಧವನ್ 60; ಹುಸೈನ್ 50ಕ್ಕೆ 3, ಸುಂಝಾಮುಲ್ ಹುಸೈನ್ 74ಕ್ಕೆ 2).
ಬಾಂಗ್ಲಾದೇಶ 23.5 ಓವರ್‌ಗಳಲ್ಲಿ ಆಲೌಟ್ 84(ಮೆಹಾದಿ ಹಸನ್ ಮಿರಾಝ್ 24; ಬಿ.ಕುಮಾರ್ 13ಕ್ಕೆ3, ಉಮೇಶ್ ಯಾದವ್ 16ಕ್ಕೆ 3)
.........







