ನೀರಿನ ಸಂಪರ್ಕ ಕಡಿತಕ್ಕೆ ಅಡ್ಡಿ ಪಡಿಸಿ ಹಲ್ಲೆಗೆ ಯತ್ನ: ಪುರಸಭಾ ಮುಖ್ಯಾಧಿಕಾರಿಯಿಂದ ದೂರು
ಮೂಡುಬಿದಿರೆ, ಮೇ 30: ಕಳೆದ ಆರು ವರ್ಷಗಳಿಂದ ನೀರಿನ ಬಿಲ್ಲನ್ನು ಪುರಸಭೆಗೆ ಪಾವತಿಸದೆ ಬಾಕಿ ಇಟ್ಟಿರುವ ಹಿನ್ನೆಲೆಯಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸಲು ಹೋಗಿದ್ದ ಪುರಸಭಾ ಸಿಬ್ಬಂದಿಗಳ ಕರ್ತವ್ಯಕ್ಕೆ ವ್ಯಕ್ತಿಯೋರ್ವ ಅಡ್ಡಿ ಪಡಿಸಿ ಹಲ್ಲೆಗೆ ಯತ್ನಿಸಿದ ಘಟನೆ ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಕೋಟೆಬಾಗಿಲಿನಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಮಾರ್ಪಾಡಿ ಗ್ರಾಮದ ಕೋಟೆಬಾಗಿಲಿನ ಪಿ.ಎಚ್. ಅಬೂಬಕ್ಕರ್ ಅವರು ಪುರಸಭಾ ಸಿಬ್ಬಂದಿಗಳಾದ ಆನಂದ ಬಾಬು ಮತ್ತು ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ತಿಕ್, ರಮೇಶ್, ರವಿರಾಜ್ ಹಾಗೂ ಪ್ಲಂಬರ್ ಫಿರೋಝ್ ಎಂಬವರ ಮೇಲೆ ಹಲ್ಲೆಗೆ ಯತ್ನಿಸಿದ್ದರು ಎಂದು ದೂರು ನೀಡಲಾಗಿದೆ.
ನೀರಿನ ಬಿಲ್ಲು ಪಾವತಿಸದ ಮನೆಗಳ ನೀರಿನ ಸಂಪರ್ಕ ಕಡಿತಗೊಳಿಸುವ ಪ್ರಕ್ರಿಯೆಯು ಪುರಸಭಾ ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿದ್ದು, ಈ ಸಂದರ್ಭ ಮಂಗಳವಾರದಂದು ಪುರಸಭೆಯ ವಾಟರ್ ಸಪ್ಲೈ ಹುದ್ದೆಯನ್ನು ನಿರ್ವಹಿಸುತ್ತಿರುವ ಆನಂದ ಬಾಬು ಅವರು ಸಿಬ್ಬಂದಿ ಜತೆಗೂಡಿ ನೀರಿನ ಬಿಲ್ ಪಾವತಿಸದೆ ಸುಮಾರು 38,405 ರೂ. ಬಾಕಿ ಇಟ್ಟಿರುವ ಕೋಟೆಬಾಗಿಲಿನ ಅಬೂಬಕ್ಕರ್ ಮನೆಯ ಸಂಪರ್ಕವನ್ನು ಕಡಿತಗೊಳಿಸಲು ತೆರಳಿದಾಗ ಅವರು ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆನ್ನಲಾಗಿದೆ.
ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸದೆ ಮೌನವಾದ ಸಿಬ್ಬಂದಿಗಳು: ಹಲ್ಲೆಗೆ ಯತ್ನಿಸಿದ ಘಟನೆಗೆ ಸಬಂಧಿಸಿದಂತೆ ಪುರಸಭಾ ಸಿಬ್ಬಂ ದಿಗಳು ಸಂಜೆವರೆಗೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸದೆ ಪ್ರತಿಭಟನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ ಘಟನೆಯೂ ನಡೆಯಿತು.
ಪುರಸಭಾ ಮುಖ್ಯಾಧಿಕಾರಿ ಶೀನ ನಾಯ್ಕಾ ಪೊಲೀಸರಿಗೆ ದೂರು ನೀಡಿದ್ದಾರೆ.







