ಎಸೆಸೆಲ್ಸಿ: ಪ್ರತಿಭಾನ್ವಿತ ಕೊರಗ ಮಕ್ಕಳಿಗೆ ಕೆಡಿಪಿಯಲ್ಲಿ ಸನ್ಮಾನ

ಉಡುಪಿ, ಮೇ 30: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ 500ಕ್ಕಿಂತ ಅಧಿಕ ಅಂಕಗಳಿಸಿದ ನಾಲ್ವರು ಪ್ರತಿಭಾನ್ವಿತ ಕೊರಗ ಮಕ್ಕಳನ್ನು ಇಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಸಭೆಯಲ್ಲಿ ಸನ್ಮಾನಿಸಲಾಯಿತು.
ಜಿಲ್ಲೆಯ ಒಟ್ಟು 72 ಮಂದಿ ಕೊರಗ ಮಕ್ಕಳಿಗೆ ಐಟಿಡಿಪಿ ಹಾಗೂ ಶಿಕ್ಷಣ ಇಲಾಖೆ ವಿಶೇಷ ಬೋಧನಾ ತರಗತಿಗಳನ್ನು ನಡೆಸಿ ಪರೀಕ್ಷೆಗೆ ಸಿದ್ಧಪಡಿಸಿದ್ದು, ಇವರಲ್ಲಿ 43 ಮಂದಿ ತೇರ್ಗಡೆಗೊಂಡಿದ್ದಾರೆ. ಈ 43 ಮಂದಿಯಲ್ಲಿ 26 ಮಂದಿ ವಿಶಿಷ್ಟ ಹಾಗೂ ಪ್ರಥಮ ದರ್ಜೆಯಲ್ಲಿ, 15 ಮಂದಿ ದ್ವಿತೀಯ ದರ್ಜೆಯಲ್ಲಿ ಉಳಿದಿಬ್ಬರು ತೃತೀಯ ದರ್ಜೆಯಲ್ಲಿ ತೇರ್ಗಡೆಗೊಂಡಿದ್ದಾರೆ ಎಂದು ಐಟಿಡಿಪಿ ಅಧಿಕಾರಿ ವಿಶ್ವನಾಥ್ ಶೆಟ್ಟಿ ತಿಳಿಸಿದ್ದಾರೆ.
ಒಟ್ಟು 625 ಅಂಕಗಳಲ್ಲಿ 539 ಅಂಕ (ಶೇ.86.24) ಗಳಿಸಿದ ವಂಡ್ಸೆ ಸರಕಾರಿ ಪ್ರೌಢ ಶಾಲೆಯ ವಿಘ್ನೇಶ್, 524 (ಶೇ.83.84) ಅಂಕಗಳಿಸಿದ ಶಂಕರನಾರಾಯಣ ಮದರ್ ಥೆರೆಸಾ ಪ್ರೌಢ ಶಾಲೆಯ ಪ್ರತೀಕ್ಷಾ, 513 ಅಂಕಗಳಿಸಿದ ಜಾನುವಾರು ಕಟ್ಟೆ ಸರಕಾರಿ ಪ್ರೌಢ ಶಾಲೆಯ ಆದರ್ಶ್ ಹಾಗೂ 505 (ಶೇ.80.80) ಅಂಕಗಳಿಸಿದ ಸರಕಾರಿ ಪ್ರೌಢ ಶಾಲೆ ರಾಜೀವನಗರದ ಅನುಷಾ ಅವರನ್ನು ಇಂದು ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ, ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷ ದಿನಕರಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ.ಬಾಲಕೃಷ್ಣ, ಉಪವಿಭಾಗಾಧಿಕಾರಿ ಶಿಲ್ಪಾನಾಗ್ ಉಪಸ್ಥಿತ ರಿದ್ದರು.







