ಮೈಸೂರು ಸಂಸ್ಥಾನ- ಮಠದ ನಡುವೆ ಹಳೆಯ ಸಂಬಂಧ: ಮಹಾರಾಜ

ಉಡುಪಿ, ಮೇ 30: ಅದಮಾರು ಮಠದ ನವೀಕೃತ ಅತಿಥಿ ಗೃಹವನ್ನು ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಂಗಳವಾರ ಉದ್ಘಾಟಿಸಿದರು.
ಮೈಸೂರು ಸಂಸ್ಥಾನ ಮತ್ತು ಉಡುಪಿ ಮಠದ ನಡುವಿನ ಸಂಬಂಧ ಬಹಳ ಹಳೆಯದು. 1964ರಲ್ಲಿ ಜಯಚಾಮರಾಜ ಒಡೆಯರ್ ಈ ಅತಿಥಿ ಗೃಹವನ್ನು ಉದ್ಘಾಟಿಸಿದರೆ, ನವೀಕೃತ ಕಟ್ಟಡವನ್ನು ನಾನು ಉದ್ಘಾಟಿಸಿದ್ದೇನೆ. ಆಕಸ್ಮಿಕ ಎಂಬಂತೆ ಅವರು ಧರಿಸಿದ್ದ ಪೇಟಾವನ್ನೇ ನಾನು ಇಂದು ಧರಿಸಿಕೊಂಡು ಬಂದಿದ್ದೇನೆ. ವಸತಿ ಗೃಹ ಉದ್ಘಾಟಿಸಿದ ಕೂಡಲೇ ಮಳೆಯಾಗಿದೆ. ಇದು ದೇವರ ಇಚ್ಛೆ. ಸಂಸ್ಥಾನದ ಜವಾಬ್ದಾರಿ ತೆಗೆದುಕೊಂಡು ನಿನ್ನೆಗೆ ಎರಡು ವರ್ಷಗ ಳಾಗಿವೆ. ಜನರ ಪ್ರೀತಿ ನೋಡಿ ತುಂಬಾ ಸಂತೋಷವಾಗಿದೆ ಎಂದು ಮಹಾ ರಾಜ ಯದುವೀರ ಒಡೆಯರ್ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ, ಯಾತ್ರಿಕರ ಸೇವೆ ಕೃಷ್ಣನ ಸೇವೆಯೇ ಆಗಿದೆ. ಸಾಮಾ ಜಿಕ, ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ ಶ್ರೀ ವಿಬುಧೇಶತೀರ್ಥ ಸ್ವಾಮೀಜಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದರು.
ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಅತಿಥಿ ಗೃಹದಿಂದ ಬರುವ ಲಾಭದಲ್ಲಿ ಶೇ75ರಷ್ಟು ಹಣವನ್ನು ದಾನ ಧರ್ಮಗಳಿಗೆ ಬಳಸಲಾಗುತ್ತದೆ. ಈ ವರೆಗೂ ಸುಮಾರು 50 ಲಕ್ಷ ರೂ.ವನ್ನು ವಿವಿಧ ಸಾಮಾಜಿಕ ಉದ್ದೇಶಕ್ಕೆ ಬಳಸಲಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಅದಮಾರು ಕಿರಿಯ ಯತಿ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ, ಮೈಸೂರಿನ ರಾಜಮಾತಾ ಡಾ.ಪ್ರಮೋದಾದೇವಿ ಒಡೆಯರ್ ಉಪಸ್ಥಿತರಿದ್ದರು. ರಾಧಾಕೃಷ್ಣ ಆಚಾರ್ಯ ಸ್ವಾಗತಿಸಿದರು. ಅಶ್ವಥ್ ಭಾರಧ್ವಾಜ್ ಕಾರ್ಯಕ್ರಮ ನಿರೂಪಿಸಿದರು.







