ಪ್ರಾಕೃತಿಕ ವಿಕೋಪ ನಿರ್ವಹಣೆ; ಪ್ರತೀ ತಾಲೂಕಿಗೆ 30 ಲಕ್ಷ ರೂ. ಬಿಡುಗಡೆ: ದ.ಕ. ಜಿಲ್ಲಾಧಿಕಾರಿ
ಮಂಗಳೂರು, ಮೇ 30: ಈ ಸಾಲಿನ ಮಳೆಗಾಲದಲ್ಲಿ ಉಂಟಾ ಗಬಹುದಾದ ಪ್ರಾಕೃತಿಕ ದುರಂತ, ಸಮಸ್ಯೆಗಳಿಗೆ ತಕ್ಷಣ ಸ್ಪಂದಿ ಸಲು ಅನುಕೂಲವಾಗುವಂತೆ ಜಿಲ್ಲೆಯ ಪ್ರತೀ ತಾಲೂಕಿಗೆ 30 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಳೆಗಾಲ ಸಿದ್ಧತಾ ಕಾರ್ಯ ಗಳ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡುತ್ತಿದ್ದರು.
ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಪರಿಹಾರ ನೀಡಲು 20 ಲಕ್ಷ ರೂ. ಹಾಗೂ ತುರ್ತು ಕಾಮಗಾರಿಗಳಿಗಾಗಿ 10 ಲಕ್ಷ ರೂ. ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ಬಿಡು ಗಡೆ ಮಾಡಲಾಗುವುದು. ಜಿಲ್ಲೆಗೆ ಪ್ರಾಕೃತಿಕ ವಿಕೋಪದಡಿ 2 ಕೋ.ರೂ. ಹೆಚ್ಚುವರಿ ಅನುದಾನ ಬಿಡುಗಡೆಗೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದವರು ಹೇಳಿದರು.
ಜಿಲ್ಲೆಯ ಪ್ರತೀ ತಾಲೂಕಿನಲ್ಲಿ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಆಗಿಂ ದಾಗ್ಗೆ ಸಭೆ ನಡೆಸಿ ಪ್ರಾಕೃತಿಕ ಹಾನಿಗಳ ನಿರ್ವಹಣೆಗೆ ಕ್ರಮ ಕೈಗೊಳ್ಳಲಿದೆ. ನೆರೆ, ನೀರು ನುಗ್ಗುವ ಪ್ರದೇಶಗಳನ್ನು ಮೊದಲೇ ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಈಜುಗಾರರ, ಬೋಟ್‌ಗಳ ಸಿದ್ಧತೆ ಮಾಡಿಕೊಳ್ಳಬೇಕು ಎಂದವರು ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ದಿನದ 24 ಗಂಟೆ ಕಾರ್ಯಾಚರಿ ಸುವ ಕಂಟ್ರೋಲ್ ರೂಂ(ದೂ.ಸಂ.1077) ತೆರೆಯಲಾಗಿದೆ. ಇದೇರೀತಿ ಪ್ರತೀ ತಾಲೂಕು ಕಚೇರಿಗಳಲ್ಲೂ ಕಂಟ್ರೋಲ್ ರೂಂ ತೆರೆಯಲಾಗುವುದು ಎಂದರು.
ಕಳೆದ 20 ವರ್ಷಗಳಿಂದ ನೆರೆ ಉಂಟಾಗಿರುವ ಪ್ರದೇಶಗಳನ್ನು ಗುರುತಿಸಿ, ಅಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ನದೀ ತೀರದ ನಿವಾಸಿಗಳಿಗೆ ಅಗತ್ಯ ಮುಂಜಾಗ್ರತೆ ನೀಡಬೇಕು. ಮೆಸ್ಕಾಂ, ಅರಣ್ಯ ಹಾಗೂ ನಗರ ಸ್ಥಳೀಯ ಸಂಸ್ಥೆ, ಗ್ರಾಪಂ, ತಾಪಂ ಮತ್ತು ತಾಲೂಕು ಕಚೇರಿಗಳಲ್ಲಿ ಕಂಟ್ರೋಲ್ ರೂಂ ತೆರೆಯಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಜಿಪಂ ಸಿಇಒ ಡಾ.ಎಂ.ಆರ್. ರವಿ, ಅಪರ ಜಿಲ್ಲಾ ಧಿಕಾರಿ ಕುಮಾರ್, ಪುತ್ತೂರು ಎ.ಸಿ. ಡಾ.ರಘುನಂದನ ಮೂರ್ತಿ, ಮನಪಾ ಆಯುಕ್ತ ಮುಹಮ್ಮದ್ ನಝೀರ್ ಉಪಸ್ಥಿತರಿದ್ದರು.







