ದಿಲ್ಲಿ ಐಐಟಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

ಹೊಸದಿಲ್ಲಿ, ಮೇ 31: ದಿಲ್ಲಿ ಐಐಟಿ ಕ್ಯಾಂಪಸ್‌ನಲ್ಲಿ ಅಂತಿಮ ವರ್ಷದ ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ.
ಮಂಜುಳಾ ದೇವಕ್ (27) ಎಂಬ ವಿದ್ಯಾರ್ಥಿನಿಯ ಮೃತದೇಹ ಐಐಟಿ ಕ್ಯಾಂಪಸ್‌ನ ನಳಂದ ಅಪಾರ್ಟ್‌ಮೆಂಟ್‌ನಲ್ಲಿದ್ದ ಅವರ ಕೊಠಡಿಯಲ್ಲಿ ಮಂಗಳವಾರ ರಾತ್ರಿ 7:40ರ ವೇಳೆಗೆ ಸೀಲಿಂಗ್ ಫ್ಯಾನ್‌ನಲ್ಲಿ ನೇತಾಡುತ್ತಿತ್ತು ಎಂದು ಹೆಚ್ಚುವರಿ ಉಪ ಆಯುಕ್ತ ಚಿನ್ಮಯ್ ಬಿಸ್ವಾಲ್ ಹೇಳಿದ್ದಾರೆ.
ಜಲ ಸಂಪನ್ಮೂಲ ವಿಷಯದ ಸಂಶೋಧನಾ ವಿದ್ಯಾರ್ಥಿ ರಿತೇಶ್ ವರ್ಮಾ ಎಂಬುವವರನ್ನು ದೇವಕ್ ವಿವಾಹವಾಗಿದ್ದರು. ಅವರ ಪತಿ ಹಾಗೂ ಪೋಷಕರು ಭೋಪಾಲ್‌ನಲ್ಲಿ ವಾಸವಿದ್ದಾರೆ. ದೇವಕ್ ಅತ್ಮಹತ್ಯೆ ವಿಷಯವನ್ನು ಕುಟುಂಬಕ್ಕೆ ತಿಳಿಸಲಾಗಿದೆ ಎಂದು ಬಿಸ್ವಾಲ್ ಹೇಳಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಯಾವುದೇ ಆತ್ಮಹತ್ಯೆ ಟಿಪ್ಪಣಿ ಕೂಡಾ ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ಹೇಳಿವೆ.
Next Story





