ದಿವಾಳಿಯಂಚಿಗೆ ತಲುಪಿದ ವಿಟಿಯು ಮುಚ್ಚುವ ಭೀತಿ!

ಬೆಂಗಳೂರು, ಮೇ 31: ರಾಜ್ಯದ ಹೆಮ್ಮೆಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ದಿವಾಳಿಯಂಚಿಗೆ ತಲುಪಿದ್ದು, ಈ ಕಾರಣದಿಂದ ಇದನ್ನು ಮುಚ್ಚುವುದು ಅನಿವಾರ್ಯ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
"2014-15ರಲ್ಲಿ ಕೇಂದ್ರ ಸರಕಾರದ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿ 441 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯ ದಿವಾಳಿಯಾಗಿದೆ. ಇದೀಗ ವಿವಿಯಲ್ಲಿ ಹಣ ಇಲ್ಲ. ಈ ಕಾರಣದಿಂದ ಬಹುಶಃ ಇದನ್ನು ಮುಚ್ಚಬೇಕಾಗಬಹುದು" ಎಂದು ಅವರು ಹೇಳಿದ್ದಾರೆ.
ವಿಟಿಯು ಪರೀಕ್ಷೆಯ ವಿವಿಧ ಸೆಮಿಸ್ಟರ್ ಫಲಿತಾಂಶಗಳನ್ನು ಪ್ರಕಟಿಸಲು ಏಕೆ ವಿಳಂಬ ಮಾಡಲಾಗುತ್ತಿದೆ ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ, ಈ ಮಾಹಿತಿಯನ್ನು ಸಚಿವರು ಹೊರಗೆಡವಿದರು. ಫಲಿತಾಂಶ ವಿಳಂಬಕ್ಕೆ ಹಣಕಾಸು ಮುಗ್ಗಟ್ಟು ಮುಖ್ಯ ಕಾರಣ ಎಂದು ಸ್ಪಷ್ಟಪಡಿಸಿದರು.
ವಿಶ್ವವಿದ್ಯಾನಿಲಯದಲ್ಲಿ ಭ್ರಷ್ಟಾಚಾರ ಇತ್ತು ಎನ್ನುವುದನ್ನು ಅಲ್ಲಗಳೆಯುವುದಿಲ್ಲ. ಕೇಂದ್ರ ಸರಕಾರ 441 ಕೋಟಿ ರೂಪಾಯಿ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಕಡಿಮೆ ವೆಚ್ಚದಲ್ಲೇ ಮೌಲ್ಯಮಾಪನ ಮಾಡುವುದು ಅನಿವಾರ್ಯವಾಯಿತು. ಇದು ಫಲಿತಾಂಶ ವಿಳಂಬಕ್ಕೆ ಕಾರಣ. ಹೊಸ ವ್ಯವಸ್ಥೆಯಿಂದಾಗಿ ಮೌಲ್ಯಮಾಪನ ಸುಮಾರು 4-5 ಕೋಟಿಯಷ್ಟು ಅಗ್ಗವಾಗಿದೆ. ಆದರೆ ಮುಂದಿನ ವರ್ಷಗಳಲ್ಲಿ ಈ ವಿಳಂಬ ಸಾಧ್ಯತೆ ಇಲ್ಲ ಎಂದು ಹೇಳಿದರು.







