ಅಮಿತ್ ಶಾ ಭೇಟಿ ಹಿನ್ನೆಲೆ: ಬುಡಕಟ್ಟು ಕುಟುಂಬಕ್ಕೆ ಬಂತು ಶೌಚಾಲಯ, ಎಲ್ಪಿಜಿ ಸ್ಟೌ!

ಗುಜರಾತ್, ಮೇ 31: ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದ ಬುಡಕಟ್ಟು ಕುಟುಂಬವೊಂದಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರ ಭೇಟಿ ವರದಾನವಾಗಿ ಪರಿಣಮಿಸಿದ್ದು, ವರ್ಷಗಳಿಂದ ಇರದ ಶೌಚಾಲಯ ಹಾಗೂ ಅಡುಗೆ ಅನಿಲ ಸಂಪರ್ಕ ದಿನಗಳೊಳಗಾಗಿ ಸಿಗುವಂತಾಗಿದೆ.
ಪಕ್ಷದ ಬೂತ್ ಮಟ್ಟದ ವಿಸ್ತಾರಕ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಮಿತ್ ಶಾ ದೆವಾಲಿಯಾ ಗ್ರಾಮಕ್ಕೆ ಭೇಟಿ ನೀಡುತ್ತಿದ್ದು, ಅವರು ಅಲ್ಲಿ ತಂಗುವ ಪೋಪಟ್ ಭಾಯಿ ರತ್ವಾ ಎಂಬವರ ಮನೆಯ ಮುಂದೆ ಶೌಚಾಲಯ ನಿರ್ಮಿಸಲಾಗಿದ್ದು, ವಿಶೇಷ ಅತಿಥಿಗಳಿಗೆ ಆಹಾರ ನೀಡುವುದಕ್ಕಾಗಿ ತಾತ್ಕಾಲಿಕ ಅಡುಗೆ ಅನಿಲ ಸಿಲಿಂಡರನ್ನು ಅಳವಡಿಸಲಾಗಿದೆ!.
ಹಿರಿಯ ಬಿಜೆಪಿ ಕಾರ್ಯಕರ್ತ ಹಾಗೂ ಬುಡಕಟ್ಟು ರೈತರಾಗಿರುವ ರತ್ವಾ ಪಕ್ಷದ ಹಿರಿಯ ನಾಯಕ ತನ್ನ ಮನೆಗೆ ಭೇಟಿ ನೀಡಲಿರುವುದರಿಂದ ಉತ್ಸುಕರಾಗಿದ್ದಾರೆ. “10 ದಿನಗಳ ಮೊದಲು ಅಮಿತ್ ಶಾ ಭೇಟಿ ನೀಡುವ ಬಗ್ಗೆ ತಿಳಿಸಲಾಗಿತ್ತು. ಹೊಸ ಶೌಚಾಲಯ ಹಾಗೂ ವಾಶ್ ಬೇಸಿನ್ ಹೊರತು ಬೇರ್ಯಾವುದೇ ವಿಶೇಷ ವ್ಯವಸ್ಥೆ ಮಾಡಿಲ್ಲ” ಎನ್ನುತ್ತಾರೆ ಪೋಪಟ್ ಭಾಯ್ ಅವರ ಸಂಬಂಧಿ ಮಲ್ಖಾಭಾಯ್.
“ಪಂಚಾಯತ್ ಸೋಮವಾರದಂದು ಶೌಚಾಲಯ ನಿರ್ಮಾಣ ಕಾರ್ಯ ಆರಂಭಿಸಿದ್ದು, ಇಂದಿಗೆ ಕಾಮಗಾರಿ ಪೂರ್ಣವಾಗಿದೆ. ಮನೆಯ ಹಿಂಬದಿ ನಮಗೆ ಶೌಚಾಲಯವಿದೆ. ಆದರೆ ಹೊಸ ಶೌಚಾಲಯವನ್ನು ಅತಿಥಿಗಳಿಗಾಗಿ ಕಟ್ಟಲಾಗಿದೆ” ಎಂದು ಪೋಪಟ್ ರ ಪುತ್ರ ಅತುಲ್ ಹೇಳಿದ್ದಾರೆ.
ಇಷ್ಟೇ ಅಲ್ಲದೆ ಅತಿಥಿಗಳಿಗಾಗಿ ಆದಿವಾಸಿಗಳ ವಿಶೇಷ ತಿನಿಸುಗಳಾದ “ಮಕ್ಕೈ ನ ರೋಟ್ಲಾ”, “ವಡಾ” ಹಾಗೂ “ತುವೆರ್ ಬಾಜಿ”ಯನ್ನು ತಯಾರಿಸಲಾಗುತ್ತಿದೆ. ಎಲ್ ಪಿಜಿ ಸಂಪರ್ಕಕ್ಕಾಗಿ ರತ್ವಾ ಸಮುದಾಯದವರು ಹಲವು ವರ್ಷಗಳಿಂದ ಅರ್ಜಿಗಳನ್ನು ಸಲ್ಲಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಅಲ್ಲದೆ ಹಲವು ಮೂಲಭೂತ ಸೌಲಭ್ಯಗಳಿಂದ ಈ ಬುಡಕಟ್ಟಿನ ಜನರು ವಂಚಿತರಾಗಿದ್ದಾರೆ.







