ಮಲಯಾಳಂ ಕಡ್ಡಾಯ ವಿರೋಧಿಸಿ ಕನ್ನಡ ಹೋರಾಟ ಸಮಿತಿಯಿಂದ ಉಪವಾಸ ಸತ್ಯಾಗ್ರಹ

ಕಾಸರಗೋಡು, ಮೇ 31: ಕೇರಳ ಸರಕಾರದ ಮಲಯಾಳಂ ಕಡ್ಡಾಯ ಆದೇಶಕ್ಕೆ ಪ್ರತಿಭಟಿಸಿ ಕನ್ನಡ ಹೋರಾಟ ಸಮಿತಿಯ ನೇತೃ ತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ನಡೆಯುತ್ತಿದ್ದು, ಹಿರಿಯ ಹೋರಾಟಗಾರ ಅಡೂರು ಉಮೇಶ್ ನಾಯ್ಕ್ ಉದ್ಘಾಟಿಸಿದರು.
ಬುಧವಾರ ಬೆಳಗ್ಗೆ ಆರಂಭಗೊಂಡ ಉಪವಾಸ ಸತ್ಯಾಗ್ರಹ ಸಂಜೆ 5 ಗಂಟೆವರೆಗೆ ನಡೆಯಲಿದೆ. ನ್ಯಾಯವಾದಿ ಕೆ. ಮುರಳೀಧರ ಬಳ್ಳಕ್ಕುರಾಯ ಅಧ್ಯಕ್ಷತೆ ವಹಿಸಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ, ಕೆ . ಶ್ರೀಕಾಂತ್ , ಎಸ್.ವಿ. ಭಟ್, ಸುಬ್ರಹ್ಮಣ್ಯ ಭಟ್, ರಾಮಣ್ಣ ರಾವ್, ಪುರುಷೋತ್ತಮ ಮಾಸ್ತರ್, ಉಮೇಶ್ ಸಾಲಿಯಾನ್, ವಾಮನ ರಾವ್, ಪುರುಷೋತ್ತಮ ಮಾಸ್ತರ್, ಕೆ. ಭಾಸ್ಕರ, ಸತೀಶ್ ಮಾಸ್ತರ್, ಗೋಪಾಲಕೃಷ್ಣ ಶೆಟ್ಟಿ ಅರಿಬೈಲು, ಜೋಗೇಂದ್ರ ನಾಥ್ ವಿದ್ಯಾನಗರ, ಟಿ. ಶಂಕರನಾರಾಯಣ ಭಟ್, ಮಹಾಲಿಂಗೇಶ್ವರ ಭಟ್, ಶ್ರೀಕಾಂತ್, ಸತ್ಯನಾರಾಯಣ ಎಂ., ಡಾ. ನರೇಶ್ ಮುಳ್ಳೇರಿಯ, ಡಾ. ಗಣಪತಿ, ವಿನೋದ್ ಮಾಸ್ತರ್, ಸವಿತಾ ಟೀಚರ್, ಜಗದೀಶ್ ಕೂಡ್ಲು, ಬಾಲಮಧುರಕಾನ ಹಾಗೂ ನೂರಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಮೇ 23ರಂದು ಭಾಷಾ ಮಸೂದೆಯನ್ನು ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ದಿಗ್ಬಂಧನ ಚಳವಳಿ ನಡೆಸಲಾಗಿತ್ತು. ಆ ಬಳಿಕ 27ರಂದು ಕಾಸರಗೋಡು, ಮಂಜೇಶ್ವರ ತಾಲೂಕು ಕಚೇರಿಗಳಿಗೆ ಜಾಥಾ ನಡೆಸಲಾಗಿತ್ತು.