ಇಎಸ್‌ಪಿಎನ್ 100 ಅತ್ಯಂತ ಖ್ಯಾತ ಅಥ್ಲೀಟ್ ಗಳ ಪಟ್ಟಿಯಲ್ಲಿ ಕ್ರಿಸ್ಟಿಯಾನೊ ಟಾಪರ್
ಭಾರತದ ಯಾರಿದ್ದಾರೆ ಈ ಪಟ್ಟಿಯಲ್ಲಿ ಗೊತ್ತೇ ?

ಹೊಸದಿಲ್ಲಿ, ಮೆ 31 : ಇಎಸ್‌ಪಿಎನ್ ತನ್ನ 100 ಅತ್ಯಂತ ಖ್ಯಾತ ಅಥ್ಲೀಟ್ ಗಳ ಪಟ್ಟಿ ಬಿಡುಗಡೆ ಮಾಡಿದ್ದು ಪೋರ್ಚುಗೀಸ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಪ್ರಥಮ ಸ್ಥಾನ ಪಡೆದಿರುವ ಈ ಪಟ್ಟಿಯಲ್ಲಿ ಭಾರತದ ನಾಲ್ಕು ಮಂದಿ ಕ್ರೀಡಾಪಟುಗಳು ಸ್ಥಾನ ಪಡೆದಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 13ನೇ ಸ್ಥಾನದಲ್ಲಿದ್ದರೆ, 15ನೇ ಸ್ಥಾನ ಮಹೇಂದ್ರ ಸಿಂಗ್ ಧೋನಿಗೆ ಹೋಗಿದೆ. ವಿರಾಟ್ ಕಳೆದ ವರ್ಷ ಈ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದರೆ ಧೋನಿ ಕಳೆದ ಬಾರಿ 14ನೇ ಸ್ಥಾನ ಪಡೆದಿದ್ದರು.
ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇತರ ಕ್ರಿಕೆಟಿಗರೆಂದರೆ ಯುವರಾಜ್ ಸಿಂಗ್ ಹಾಗೂ ಸುರೇಶ್ ರೈನಾ. ಯುವರಾಜ್ 90ನೇ ಸ್ಥಾನ ಪಡೆದುಕೊಂಡಿದ್ದರೆ, ರೈನಾ 95ನೇ ಸ್ಥಾನದಲ್ಲಿದ್ದಾರೆ.
ಇಎಸ್‌ಪಿಎನ್ ಅಂಕಿಸಂಖ್ಯೆಗಳ ಪ್ರಕಾರ ವಿರಾಟ್ ಕೊಹ್ಲಿ ಅವರಿಗೆ ಟ್ವಿಟ್ಟರ್, ಫೇಸ್ ಬುಕ್ ಹಾಗೂ ಇನ್ ಸ್ಟಾಗ್ರಾಂನಲ್ಲಿ ಒಟ್ಟು 6 ಕೋಟಿ ಫಾಲೋವರ್ಸ್ ಇದ್ದು ಜಾಹೀರಾತುಗಳಿಂದ ಅವರು 17.4 ಮಿಲಿಯನ್ ಡಾಲರ್ ಗಳಿಸುತ್ತಾರೆ ಎಂಬ ಮಾಹಿತಿಯಿದೆ. ಅಂತೆಯೇ ಧೋನಿ ಜಾಹೀರಾತುಗಳಿಂದ 16 ಮಿಲಿಯನ್ ಡಾಲರ್ ಆದಾಯ ಗಳಿಸುತ್ತಿದ್ದಾರೆ ಹಾಗೂ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ 3 ಕೋಟಿ ಫಾಲೋವರ್ಸ್ ಇದ್ದಾರೆ. ಯುವರಾಜ್ ಸಿಂಗ್ ಅವರು 1.3 ಮಿಲಿಯನ್ ಡಾಲರ್ ಆದಾಯ ಗಳಿಸುತ್ತಿದ್ದಾರೆ ಹಾಗೂ 2 ಕೋಟಿ ಫಾಲೋವರ್ಸ್ ಇದ್ದರೆ ರೈನಾ ಅವರಿಗೆ 339000 ಡಾಲರ್ ಆದಾಯ ಜಾಹೀರಾತು ಮುಖಾಂತರ ಬರುತ್ತಿದ್ದು ಅವರಿಗೆ ಒಂದು ಕೋಟಿ ಫಾಲೋವರ್ಸ್ ಇದ್ದಾರೆ.
ಈ ಬಾರಿ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.
ಇಎಸ್‌ಪಿಎನ್ ಪಟ್ಟಿಯಲ್ಲಿ ಎರಡನೇ ಸ್ಥಾನ ಅಮೆರಿಕನ್ ಫುಟ್ಬಾಲ್ ಆಟಗಾರ ಲೆಬ್ರಾನ್ ಜೇಮ್ಸ್ ಅವರಿಗೆ ಹೋಗಿದ್ದರೆ, ಮೂರನೇ ಸ್ಥಾನ ಬಾರ್ಸಿಲೋನಾದ ಲಿಯೊನೆಲ್ ಮೆಸ್ಸಿ ಪಡೆದುಕೊಂಡಿದ್ದಾರೆ.







