ದೇವರನ್ನು ಪ್ರೀತಿಯಿಂದ ಆರಾಧಿಸಿ, ದ್ವೇಷದಿಂದಲ್ಲ !
ಗಾಯಕ ಹುಸೇನ್ ನ ರಮಝಾನ್ ವೀಡಿಯೊ ಸೂಪರ್ ಹಿಟ್

ಕುವೈತ್,ಮೇ 31: ಭಾವಿ ಆತ್ಮಹತ್ಯಾ ಬಾಂಬರ್ ಹಾಗೂ ಓರ್ವ ಶ್ರದ್ಧಾಳುವಿನ ನಡುವಿನ ಮುಖಾಮುಖಿಯನ್ನು ಬಿಂಬಿಸುವ ವೀಡಿಯೊ ಜಾಹೀರಾತೊಂದು ರಮಝಾನ್ ಮಾಸ ಆರಂಭಗೊಂಡ ಎರಡೇ ದಿನಗಳಲ್ಲಿ ವೈರಲ್ ಆಗಿದೆ.
ಅಲ್-ಖೈದಾ ಅಥವಾ ಐಸಿಸ್ ಕೊಲ್ಲಿ ಪ್ರದೇಶದಲ್ಲಿ ನಡೆಸಿರುವ ಹಲವಾರು ಬಾಂಬ್‌ದಾಳಿಗಳ ಚಿತ್ರಗಳನ್ನು ವೀಡಿಯೊ ಒಳಗೊಂಡಿದೆ. ಈ ದಾಳಿಗಳಲ್ಲಿ ಬದುಕುಳಿದವರು ಮತ್ತು ಹತರಾದವರ ಕುಟುಂಬಗಳನ್ನೂ ಈ ವೀಡಿಯೊದಲ್ಲಿ ತೋರಿಸಲಾಗಿದೆ.
ಎಮಿರೇಟ್ಸ್‌ನ ಪಾಪ್ ತಾರೆ ಹುಸೇನ್ ಅಲ್-ಜಾಸ್ಮಿ ಕಾಣಿಸಿಕೊಂಡಿರುವ ಈ ವೀಡಿಯೊವನ್ನು ಕುವೈತ್‌ನ ಪ್ರಮುಖ ದೂರಸಂಪರ್ಕ ಸಂಸ್ಥೆ ಝೈನ್‌ನ ಯು ಟ್ಯೂಬ್ ಪೇಜ್‌ನಲ್ಲಿ ಎರಡು ಮಿಲಿಯನ್‌ಗೂ ಅಧಿಕ ಜನರು ವೀಕ್ಷಿಸಿದ್ದಾರೆ. ಫೇಸ್‌ಬುಕ್‌ನಲ್ಲಿ 4,000ಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ.
ಮಧ್ಯ ಪ್ರಾಚ್ಯದಾದ್ಯಂತ ಕಾರ್ಯಾಚರಣೆಯನ್ನು ಹೊಂದಿರುವ ಝೈನ್ ಮೂರು ನಿಮಿಷಗಳ ಅವಧಿಯ ಈ ವೀಡಿಯೊವನ್ನು ಶುಕ್ರವಾರ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದು, 'ನಿಮ್ಮ ದೇವರನ್ನು ಪ್ರೀತಿಯಿಂದ ಆರಾಧಿಸಿ,ಭೀತಿವಾದದಿಂದಲ್ಲ' ಎನ್ನುವುದು ವೀಡಿಯೊದ ಮುಖ್ಯ ಸಂದೇಶವಾಗಿದೆ.
ಜಾಹೀರಾತಿನ ಆರಂಭದಲ್ಲಿ ಓರ್ವ ವ್ಯಕ್ತಿ ಬಾಂಬ್ ತಯಾರಿಸುತ್ತಿರುವ ದೃಶ್ಯವಿದ್ದು, ಹಿನ್ನೆಲೆಯಲ್ಲಿ ಮಗುವಿನ ಸ್ವರವೊಂದು 'ನಾನು ದೇವರಿಗೆ ಎಲ್ಲವನ್ನೂ ಹೇಳುತ್ತೇನೆ' ಎನ್ನುವುದು ಕೇಳಿಬರುತ್ತದೆ.
ನೀವು ನಮ್ಮ ಮಕ್ಕಳಿಂದ ಸ್ಮಶಾನಗಳು ತುಂಬಿ ಹೋಗಲು ಮತ್ತು ನಮ್ಮ ಶಾಲೆಯಲ್ಲಿನ ಡೆಸ್ಕ್‌ಗಳು ಖಾಲಿ ಖಾಲಿಯಾಗಿರಲು ಕಾರಣರಾಗಿದ್ದೀರಿ ಎಂದು ಆ ಸ್ವರವು ಹೇಳುತ್ತದೆ.
ಆದರೆ ವೀಡಿಯೊ ಮದುವೆಯ ಸಡಗರ ಮತ್ತು ಬಿಳಿಯ ಉಡುಪುಗಳಲ್ಲಿ ಮಿಂಚುತ್ತಿರುವ ಹರ್ಷಭರಿತ ಮಕ್ಕಳ ಫೂಟೇಜ್‌ನೊಂದಿಗೆ ಸಕಾರಾತ್ಮಕ ಧಾಟಿಯಲ್ಲಿ ಅಂತ್ಯಗೊಂಡಿದೆ.
ಕಪ್ಪು ಹಿನ್ನೆಲೆಯ ಮೇಲೆ ಸೂಪರ್‌ಇಂಪೋಸ್ ಆಗಿರುವ 'ಅವರ ದ್ವೇಷವನ್ನು ನಾವು ಪ್ರೀತಿಯ ಹಾಡುಗಳಿಂದ ಎದುರಿಸುತ್ತೇವೆ' ಎಂಬ ಅಡಿಬರಹದೊಂದಿಗೆ ಈ ವೀಡಿಯೊ ಕೊನೆಗೊಳ್ಳುತ್ತದೆ.







