ಬಾಬಾಬುಡನ್ ಗಿರಿ ವಿವಾದ ಇತ್ಯರ್ಥಕ್ಕೆ ಸಮಿತಿ ರಚನೆ: ಕೋಸೌವೇ ಸ್ವಾಗತ
ಚಿಕ್ಕಮಗಳೂರು, ಮೇ.31: ಸಚಿವ ಸಂಪುಟದ ಸಭೆಯಲ್ಲಿ ರಾಜ್ಯ ಸರಕಾರ ಬಾಬಾಬುಡಾನ್ ಗಿರಿ ಕುರಿತಾಗಿ ವಿವಾದ ಪರಿಹರಿಸಲು ಕೈಗೊಂಡಿರುವ ನಿರ್ಣಯವನ್ನು ಸ್ವಾಗತಿಸುವುದಾಗಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಕಾರ್ಯದರ್ಶಿ ಗೌಸ್ ಮೊಹಿದ್ದೀನ್ ತಿಳಿಸಿದ್ದಾರೆ.
ಅವರು ಬುಧವಾರ ಈ ಕುರಿತು ಹೇಳಿಕೆ ನೀಡಿದ್ದು, ಕೋಮು ಸೌಹಾರ್ದ ವೇದಿಕೆಯು ಹೈಕೋರ್ಟ್ ಆದೇಶಕ್ಕೆ 1975ಕ್ಕೂ ಹಿಂದಿನ ಯಥಾ ಸಥಿತಿಯನ್ನು ಉಳಿಸಿಕೊಳ್ಳುವಂತೆ ಮತ್ತು ಯಾವುದೇ ಹೊಸ ಆಚರಣೆಗಳಿಗೆ ಅವಕಾಶ ನೀಡದಂತೆ 2008ರ ಡಿಸೆಂಬರ್ 1ರಂದು ಸುಪ್ರಿಂಕೋರ್ಟ್‌ನಲ್ಲಿ ತಡೆಯಾಜ್ನೆಯನ್ನು ತಂದಿತ್ತು. ಈ ಕುರಿತಂತೆ 2015ರ ಸೆ.2ರವರೆಗೆ ಸುಪ್ರಿಂಕೋರ್ಟ್‌ನಲ್ಲಿ ಮೊಕದ್ದಮೆ ನಡೆಯುತ್ತಿತ್ತು. ಅನಂತರ ರಾಜ್ಯ ಸರಕಾರ ಈ ಕುರಿತು ನ್ಯಾಯಬದ್ದವಾದ ತೀರ್ಮಾನವನ್ನು ಕೈಗೊಳ್ಳುವಂತೆ ಸೂಚಿಸಿ ಕಡತವನ್ನು ವರ್ಗಾಯಿಸಿತ್ತು ಎಂದಿದ್ದಾರೆ.
ಸರ್ಕಾರವು ಕೆಲ ತಿಂಗಳ ಹಿಂದೆ ಒಂದು ಸಮಿತಿಯನ್ನು ರಚಿಸಿ ಸಂಪುಟ ಸಭೆಯಲ್ಲಿ ನ್ಯಾಯ ಸಮ್ಮತ ಹಾಗೂ ಶಾಂತಿಯುತ ತೀರ್ಮಾನ ಕೈಗೊಳ್ಳಲು ಹೈಕೋರ್ಟ್‌ನ ಕೆಲವು ನಿವೃತ ನ್ಯಾಯಾಧೀಶರ ಸಮಿತಿ ರಚಿಸಿದೆ. ಆ ಸಮಿತಿ ನೀಡುವ ವರದಿಯನ್ನು ಆಧರಿಸಿ ರಾಜ್ಯ ಸರಕಾರ ತೀರ್ಮಾಣವನ್ನು ಕೈಗೊಳ್ಳಲು ಮುಂದಾಗುವುದಾಗಿ ತಿಳಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಹೇಳಿದ್ದಾರೆ.
ಹೀಗಾಗಿ ಇನ್ನು ಮುಂದೆ ಬಾಬಾಬುಡಾನ್‌ಬಗಿರಿಯಲ್ಲಿ ಹಿಂದಿನಂತೆ ಸರ್ವ ಧರ್ಮದ ಜನರು ಯಾವುದೇ ಬೇಧ ಭಾವ ಇಲ್ಲದಂತೆ ಗಿರಿಗೆ ತೆರಳಿ ಬರುವಂತಾಗುವ ಭರವಸೆ ಮೂಡಿದೆ. ಹಿಂದೆ ಇದೇ ಪದ್ದತಿ ಗಿರಿಯಲ್ಲಿತ್ತು. ಆದರೆ ಸಂಘಪರಿವಾರದ ಕೆಲ ನಾಯಕರು ರಾಜಕೀಯ ಕಾರಣಕ್ಕಾಗಿ ಇದನ್ನು ವಿವಾದಿತ ಕೇಂದ್ರವನ್ನಾಗಿಸಿದ ನಂತರ ಇಲ್ಲಿಗೆ ಬರಲು ಭಕ್ತರು ಭಯಗೊಳ್ಳುವಂತಾಗಿತ್ತು. ಸರ್ಕಾರದ ನಿರ್ಣಯದಿಂದ ಎಲ್ಲಾ ಧರ್ಮದ ಜನರಿಗೂ ಸರ್ವ ಸಮ್ಮತ ನಿಲುವು ಪ್ರಕಟವಾಗಿ ಯಾವುದೇ ಸೀಮಿತ ಧರ್ಮೀಯರಿಗೆ ಬಾಬಾಬುಡನ್ ಗಿರಿ ಆಗದಿರಲಿ ಎಂದು ತಿಳಿಸಿದ್ದಾರೆ.







