ಆಂಗ್ಲ ವ್ಯಾಮೋಹಕ್ಕೆ ಕನ್ನಡ ಶಾಲೆಗಳು ಬಲಿ: ಕಜಂಪಾಡಿ ಸುಬ್ರಹ್ಮಣ್ಯ ಭಟ್

ಮೂಡುಬಿದಿರೆ, ಮೇ 31: ಆಂಗ್ಲ ಭಾಷೆಯ ಮಿತಿಮೀರಿದ ವ್ಯಾಮೋಹಕ್ಕೆ ಕನ್ನಡ ಶಾಲೆಗಳು ಬಲಿಯಾಗುತ್ತಿವೆ. ಭಾರತೀಯ ಭಾಷೆಗಳು ಶ್ರೇಷ್ಠವಾದದ್ದು. ನಮ್ಮ ಮಾತೃ ಭಾಷೆಯಿಂದ ಮಾತ್ರ ಭಾವನೆಗಳು ಅರಳಲು ಸಾಧ್ಯ ಎಂದು ಆರ್‌ಎಸ್‌ಎಸ್ ಕುಟುಂಬ ಪ್ರಬೋಧನ್ನ ಅಖಿಲ ಭಾರತ ಸಂಯೋಜಕ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಹೇಳಿದರು.
ಪ್ರೇರಣಾ ಸೇವಾ ಟ್ರಸ್ಟ್‌ನಿಂದ ಅಭಿವೃದ್ಧಿಗೊಳ್ಳಲಿರುವ ಕಡಲಕೆರೆಯ ಸೈಂಟ್ ಇಗ್ನೇಶಿಯಸ್ ಶಾಲೆಯ ದೀಕ್ಷಾವಿಧಿ ಹಾಗೂ ಪ್ರೇರಣಾ ಶಿಶು ಮಂದಿರದ ಪ್ರಾರಂಭೋತ್ಸವ ಸಮಾರಂಭದಲ್ಲಿ ದೀಕ್ಷಾವಿಧಿ ಪ್ರೋಧನೆ ಮಾಡಿ, ಮಾತನಾಡಿದರು.
ಸಂಸದ ನಳಿನ್ ಕುಮಾರ್ ಕಟೀಲ್, ‘ಪ್ರೇರಣಾ’ ಶಿಶುಮಂದಿರ ಉದ್ಘಾಟಿಸಿದರು. ಆರ್‌ಎಸ್‌ಎಸ್ ತಾಲೂಕು ಸಂಚಾಲಕ್ ಎಂ.ವಾಸುದೇವ ಭಟ್ ಸವಾರಂಭದ ಅಧ್ಯಕ್ಷತೆವಹಿಸಿದ್ದರು.
ಸುರತ್ಕಲ್ ಮಾತಾ ಡೆವಲಪರ್ಸ್ ನಿರ್ವಾಹಕ ನಿರ್ದೇಶಕ ಸಂತೋಷ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ, ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಮನೆಯಲ್ಲಿ ಶೌಚಾಲಯ ವಿಲ್ಲದಿದ್ದರೆ ಕಟ್ಟಿಸಿಕೊಡಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಲೆಕ್ಕಪರಿಶೋಧಕ ರಘುಪತಿ ಭಟ್, ಮಂಗಳೂರು ವಿವೇಕ ಟ್ರೇಡರ್ಸ್‌ನ ಮಾಲೀಕ ಎಂ.ನರೇಶ್ ಶೆಣೈ, ಮಂಗಳಾ ಕ್ಯಾಶ್ಯೂ ಇಂಡಸ್ಟ್ರೀಸ್‌ನ ಮಾಲೀಕ ಡಿ.ವೇದವ್ಯಾಸ ಕಾಮತ್, ಸಾಮಾಜಿಕ ಹೋರಾಟಗಾರ ಹನುಮಂತ ಕಾಮತ್ ಮುಖ್ಯ ಅತಿಥಿಯಾಗಿದ್ದರು.
ಶಾಲೆಯ ಮುಖ್ಯ ಶಿಕ್ಷಕ ಬಿ.ಜಯರಾಮ್ ರಾವ್, ಎಸ್‌ಡಿಎಂಸಿ ಅಧ್ಯಕ್ಷೆ ದೇವಕಿ ಉಪಸ್ಥಿತರಿದ್ದರು. ಚೇತನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಪ್ರಜ್ವಲ್ ಕಾರ್ಯಕ್ರಮ ನಿರೂಪಿಸಿದರು.







