ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಶಾಸಕ ಭೇಟಿ, ಪರಿಶೀಲನೆ
ಚಾಮರಾಜನಗರ, ಮೇ 31: ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಕಾಲೇಜಿನಲ್ಲಿ ಇರುವ ಮೂಲಭೂತ ಸಮಸ್ಯೆಗಳ ಬಗ್ಗೆ ಅಲ್ಲಿನ ಉಪನ್ಯಾಸಕರೊಂದಿಗೆ ಸಭೆ ನಡೆಸಿ, ಚರ್ಚಿಸಿದರು. ಈ ವೇಳೆ ಪ್ರಾಂಶುಪಾಲ ಮರಿಸ್ವಾಮಿ ಕಾಲೇಜಿನ ಸಮಸ್ಯೆಗಳನ್ನು ವಿವರಿಸುತ್ತಾ, ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ಇರುವುದರಿಂದ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸುವಂತೆ ಶಾಸಕರಿಗೆ ಮನವಿ ಮಾಡಿದರು. ಅಲ್ಲದೆ, ಕಾಲೇಜಿನಲ್ಲಿ ಶೌಚಾಲಯ, ಕುಡಿಯುವ ನೀರು, ಸುತ್ತುಗೋಡೆ, ಹೆಚ್ಚುವರಿ ಕೊಠಡಿಗಳ ಅವಶ್ಯಕತೆ ಇದೆ. ಕಂಪ್ಯೂಟರ್ ಮತ್ತು ಕಂಪ್ಯೂಟರ್ ಶಿಕ್ಷಕರನ್ನು ನೇಮಕಾತಿ ಮಾಡಿಕೊಡಬೇಕು ಎಂದು ಶಾಸಕರಿಗೆ ಬೇಡಿಕೆಯನ್ನಿಟ್ಟರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಸಿ. ಪುಟ್ಟರಂಗಶೆಟ್ಟಿ, ಮೆಟ್ರಿಕ್ ನಂತರದ ಶಿಕ್ಷಣ ಪ್ರತಿಯೊಬ್ಬರ ಹಕ್ಕು. ಹೀಗಾಗಿ ಹೆಣ್ಣು ಮಕ್ಕಳ ಪಿಯು ಕಾಲೇಜಿಗೆ ಸರ್ಕಾರದಿಂದ ಅಗತ್ಯ ನೆರವು ಕಲ್ಪಿಸಲಾಗುವುದು. ಕಾಲೇಜಿಗೆ ಅಗತ್ಯವಿರುವ ಅತಿಥಿ ಉಪನ್ಯಾಸಕರ ನೇಮಕಕ್ಕೆ ಅಗತ್ಯ ಕ್ರಮ ವಹಿಸಲಾಗುವುದು. ಕುಡಿಯುವ ನೀರು, ಗ್ರಂಥಾಲಯ, ಶೌಚಾಲಯ, ಸುತ್ತುಗೋಡೆ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು. ಆದರೆ ಮುಂದಿನ ದಿನಗಳಲ್ಲಿ ಕಾಲೇಜು ಇನ್ನೂ ಉತ್ತಮ ಫಲಿತಾಂಶ ಪಡೆದುಕೊಳ್ಳಲು ಉಪನ್ಯಾಸಕ ವರ್ಗ ದುಡಿಯಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭ ಹಿರಿಯ ಉಪನ್ಯಾಸಕರಾದ ನಾಗರಾಜು, ಮಹದೇವಪ್ಪ, ಗೋವಿಂದರಾಜು ಮತ್ತಿತರರು ಇದ್ದರು.







