ಪಿಎಚ್‌ಡಿ ವಿದ್ಯಾರ್ಥಿಗೆ ಹಲ್ಲೆ ನಡೆಸಿದ್ದ 9 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು
ಐಐಟಿ ಮದ್ರಾಸ್‌ನಲ್ಲಿ ಬೀಫ್ ಉತ್ಸವ - ಕ್ಯಾಂಪಸ್‌ನಲ್ಲಿ ಪ್ರತಿಭಟನೆ ಆರಂಭ

ಚೆನ್ನೈ,ಮೇ 31: ಗೋಹತ್ಯೆ ನಿಷೇಧ ಮತ್ತು ಕ್ಯಾಂಪಸ್‌ವೊಂದರಲ್ಲಿ ಏರ್ಪಡಿಸಲಾಗಿದ್ದ ಬೀಫ್ ಉತ್ಸವದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಪಿಎಚ್‌ಡಿ ವಿದ್ಯಾರ್ಥಿಯ ಮೇಲಿನ ಹಲ್ಲೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಬುಧವಾರ ಇನ್ನಷ್ಟು ತೀವ್ರಗೊಳಿಸಿದ ನೂರಾರು ವಿದ್ಯಾರ್ಥಿಗಳು ಚೆನ್ನೈನಲ್ಲಿ ಭಾರೀ ಪ್ರದರ್ಶನಗಳನ್ನು ನಡೆಸಿದರು.
ವಿದ್ಯಾರ್ಥಿ ಆರ್.ಸೂರಜ್ ಮೇಲೆ ಹಲ್ಲೆ ನಡೆಸಿ ಆತನ ಬಲಗಣ್ಣಿಗೆ ತೀವ್ರ ಹಾನಿಯನ್ನುಂಟು ಮಾಡಿರುವ ಒಂಭತ್ತು ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಐಐಟಿ-ಮದ್ರಾಸ್‌ನ ವಿದ್ಯಾರ್ಥಿಗಳ ಒಂದು ಬಣವು ಪ್ರತ್ಯೇಕ ಜಾಥಾ ನಡೆಸಿತು.
ಜಾನುವಾರು ಮಂಡಿಗಳಲ್ಲಿ ಕಸಾಯಿಖಾನೆಗಳಿಗೆ ಜಾನುವಾರುಗಳ ಮಾರಾಟವನ್ನು ನಿಷೇಧಿಸಿರುವ ಸರಕಾರದ ಅಧಿಸೂಚನೆಯು ಬೀಫ್ ಜನಪ್ರಿಯ ಆಹಾರವಾಗಿರುವ ತಮಿಳುನಾಡು ಮತ್ತು ಕೇರಳದಲ್ಲಿ ಬಹಳಷ್ಟು ಜನರ ಸಿಟ್ಟಿಗೆ ಕಾರಣವಾಗಿದೆ.
ಈ ನಿಷೇಧವು ವೈಯಕ್ತಿಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಮತ್ತು ಮಿಲಿಯಗಟ್ಟಲೆ ಜಾನುವಾರು ಮತ್ತು ಮಾಂಸ ವ್ಯಾಪಾರಿಗಳನ್ನು ಸಂಕಷ್ಟಕ್ಕೆ ತಳ್ಳಲಿದೆ ಎನ್ನುವುದು ಕೇಂದ್ರದಲ್ಲಿ ಆಡಳಿತ ಬಿಜೆಪಿಯ ರಾಜಕೀಯ ವಿರೋಧಿಗಳು ಅಭಿಪ್ರಾಯಿಸಿದ್ದಾರೆ. ಮದ್ರಾಸ್ ಉಚ್ಚ ನ್ಯಾಯಾಲಯವು ಮಂಗಳವಾರ ಈ ಅಧಿಸೂಚನೆಗೆ ನಾಲ್ಕು ವಾರಗಳ ತಡೆಯಾಜ್ಞೆಯನ್ನು ನೀಡಿದೆ.
ಐಐಟಿ ಮದ್ರಾಸ್‌ನ ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದ ಎಡಪಂಥೀಯ ಎಸ್‌ಫ್‌ಐನ ಹಲವಾರು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಘೋಷಣೆಗಳನ್ನು ಕೂಗುತ್ತಿದ್ದ ಕಾರ್ಯಕರ್ತರು ಗೋಮಾಂಸದ ಖಾದ್ಯ ಸವಿದು ನಿಷೇಧಕ್ಕೆ ಸಾಂಕೇತಿಕ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು.
ಸೂರಜ್ ಮೇಲೆ ಹಲ್ಲೆ ನಡೆಸಿದ್ದ ಆರೋಪದಲ್ಲಿ ಒಂಭತ್ತು ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು,ಅವರನ್ನು ಇನ್ನಷ್ಟೇ ಬಂಧಿಸಬೇಕಿದೆ. ಈ ಪೈಕಿ ಮನೀಷಕುಮಾರ್ ಎಂಬಾತನ ದೂರಿನ ಮೇರೆಗೆ ಸೂರಜ್ ವಿರುದ್ಧವೂ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ನಿಷೇಧವನ್ನು ಟೀಕಿಸಿರುವ ಪ್ರತಿಪಕ್ಷ ಡಿಎಂಕೆ, ಪ್ರಧಾನಿಯವರು ಏನನ್ನು ಬಯಸುತ್ತಾರೋ ಅದನ್ನೇ ನಾವು ಸೇವಿಸಬೇಕಾದ ಸ್ಥಿತಿ ಈಗ ಸೃಷ್ಟಿಯಾಗಿದೆ ಎಂದು ಹೇಳಿದೆ.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು, ಇನ್ನೊಂದು ‘ಮರೀನಾ ಕ್ರಾಂತಿ ’ಯ ಎಚ್ಚರಿಕೆಯನ್ನು ನೀಡಿದರು. ಜನವರಿಯಲ್ಲಿ ಜಲ್ಲಿಕಟ್ಟು ಪರ ಹೋರಾಟಗಾರರಿಂದ ಮರೀನಾ ಬೀಚ್‌ನಲ್ಲಿ ವ್ಯಾಪಕ ಪ್ರತಿಭಟನೆಗಳ ಬಳಿಕ ಜಲ್ಲಿಕಟ್ಟು ಕ್ರೀಡೆಗೆ ಅನುಮತಿಯನ್ನು ನೀಡಲಾಗಿತ್ತು.
ಪ್ರತಿಭಟನಾ ನಿರತ ಐಐಟಿ ವಿದ್ಯಾರ್ಥಿಗಳು ಡೀನ್‌ಗೆ ದೂರನ್ನು ಸಲ್ಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ದಾಳಿಯನ್ನು ನಡೆಸಿದ್ದರೆನ್ನಲಾಗಿರುವ ಎಬಿವಿಪಿ ವಿದ್ಯಾರ್ಥಿಗಳ ಉಚ್ಚಾಟನೆಗೆ ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ತನಿಖೆಗಾಗಿ ಡೀನ್ ಸಮಿತಿಯೊಂದನ್ನು ರಚಿಸಿದ್ದಾರೆ. ಆದರೆ ಇದರಿಂದ ತೃಪ್ತರಾಗದ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ.







