ಬಾಂಗ್ಲಾ: 27 ಮಂದಿಯನ್ನು ಸಮುದ್ರದಿಂದ ರಕ್ಷಿಸಿದ ಭಾರತೀಯ ನೌಕಾಪಡೆ

ಢಾಕಾ, ಮೇ 31: ಬಾಂಗ್ಲಾದೇಶಕ್ಕೆ ‘ಮೊರ’ ಚಂಡಮಾರುತ ಅಪ್ಪಳಿಸಿದ ಸಂದರ್ಭದಲ್ಲಿ ಸಮುದ್ರದಲ್ಲಿ ಸಿಲುಕಿಕೊಂಡಿದ್ದ 27 ಮಂದಿಯನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ.
ಬಾಂಗ್ಲಾದೇಶದ ನಗರ ಚಿತ್ತಗಾಂಗ್ ಕರಾವಳಿಯಿಂದ 100 ಮೈಲಿಗೂ ಅಧಿಕ ದೂರದಲ್ಲಿ ಸಮುದ್ರದಲ್ಲಿ ಸಿಲುಕಿಕೊಂಡಿದ್ದ 27 ಬಾಂಗ್ಲಾದೇಶೀಯರನ್ನು ಭಾರತೀಯ ನೌಕಾಪಡೆಯ ಹಡಗು ‘ಸುಮಿತ್ರಾ’ ರಕ್ಷಿಸಿದೆ ಎಂದು ಭಾರತೀಯ ನೌಕಾಪಡೆಯ ವಕ್ತಾರ ಕ್ಯಾಪ್ಟನ್ ಡಿ.ಕೆ. ಶರ್ಮ ತಿಳಿಸಿದರು. ರಕ್ಷಿಸಲ್ಪಟ್ಟವರಲ್ಲಿ ಮಹಿಳೆಯರು, ಮಕ್ಕಳು ಮತ್ತು ಹಿರಿಯರು ಸೇರಿದ್ದಾರೆ.
ಪೂರ್ವದ ನೌಕಾ ಕಮಾಂಡ್ ಬಾಂಗ್ಲಾದೇಶದಲ್ಲಿನ ತನ್ನ ರಕ್ಷಣಾ ಕಾರ್ಯಾಚರಣೆಯ ಭಾಗವಾಗಿ ಪಿ-81 ವಿಮಾನವನ್ನು ನಿಯೋಜಿಸುತ್ತಿದೆ.
‘‘ಈ ಪ್ರದೇಶದಲ್ಲಿ ಪ್ರಕ್ಷುಬ್ಧ ಹವಾಮಾನ ಪರಿಸ್ಥಿತಿ ನೆಲೆಸಿರುವುದರಿಂದ ರಕ್ಷಣಾ ಕಾರ್ಯಕ್ಕೆ ಅಡಚಣೆಯುಂಟಾಗಿದೆ’’ ಎಂದು ವಕ್ತಾರರು ತಿಳಿಸಿದರು.
ಚಂಡಮಾರುತ ‘ಮೊರ’ ಮಂಗಳವಾರ ಬಾಂಗ್ಲಾದೇಶ ಕರಾವಳಿಗೆ ಅಪ್ಪಳಿಸಿದ್ದು ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ. ನೂರಾರು ಮನೆಗಳು ಹಾನಿಗೀಡಾಗಿವೆ. ಕಡಲ ತೀರದಿಂದ 5 ಲಕ್ಷಕ್ಕೂ ಅಧಿಕ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.







