ಅಯೋಧ್ಯೆಯ ವಿವಾದಿತ ಸ್ಥಳಕ್ಕೆ ಆದಿತ್ಯನಾಥ್ ಭೇಟಿ, ಪ್ರಾರ್ಥನೆ

ಲಕ್ನೋ,ಮೇ 31: ಅಯೋಧ್ಯೆಯವಿವಾದಿತ ರಾಮಜನ್ಮಭೂಮಿ- ಬಾಬರಿ ಮಸೀದಿ ನಿವೇಶನಕ್ಕೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ ಭೇಟಿ ನೀಡಿ, ರಾಮಲಲ್ಲಾ (ಬಾಲ ರಾಮ)ನ ವಿಗ್ರಹಕ್ಕೆ ಪ್ರಾರ್ಥನೆ ಸಲ್ಲಿಸಿದರು.
ಅರ್ಚಕರು ಹಾಗೂ ಭದ್ರತಾಪಡೆಗಳ ನಡುವೆ ಆದಿತ್ಯನಾಥ್ ಪ್ರಾರ್ಥನೆ ಸಲ್ಲಿಸಿದಾಗ ಬೆಂಬಲಿಗರು ‘ ಜೈಶ್ರೀರಾಮ್’ ಹಾಗೂ ‘ಮಂದಿರ್ ವಹಿ ಬನಾಯೆಂಗೆ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.
ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ನ್ಯಾಯಾಲಯವು ಹಿರಿಯ ಬಿಜೆಪಿ ನಾಯಕರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್‌ಜೋಶಿ ಹಾಗೂ ಉಮಾಬಾರತಿ ಸೇರಿದಂತೆ 12 ಮಂದಿಯ ವಿರುದ್ಧ ಒಳಸಂಚಿನ ಆರೋಪ ದಾಖಲಿಸಿದ ಮರುದಿನವೇ ಆದಿತ್ಯನಾಥ್ ವಿವಾದಿತ ಸ್ಥಳಕ್ಕೆ ಭೇಟಿ ನೀಡಿರುವುದು ಗಮನಾರ್ಹವಾಗಿದೆ.
ಇಂದು ಬೆಳಗ್ಗೆ ಆದಿತ್ಯನಾಥ್ ಅವರು ಅಯೋಧ್ಯೆಯಲ್ಲಿರುವ ಹನುಮಾನ್ ಘರ್‌ಹಿ ದೇವಾಲಯಕ್ಕೂ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು. ಹನುಮಾನ್ ಘರ್‌ಹಿ ದೇವಾಲಯದಿಂದ ನಿರ್ಗಮಿಸಿದಾಗ ಸ್ಥಳೀಯ ಯುವಕರು ಮೋಟಾರ್ ಸೈಕಲ್‌ಗಳಲ್ಲಿ ಅವರ ವಾಹನವನ್ನು ಹಿಂಬಾಲಿಸಿದರು. ವಿವಾದಿತ ರಾಮಜನ್ಮಭೂಮಿ ನಿವೇಶನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ, ಆದಿತ್ಯನಾಥ್ ರಾಮ್ ಕಿ ಪೈದಿ ಘಾಟ್ ಸಂದರ್ಶಿಸಿದರು ಹಾಗೂ ಸರಯೂ ನದಿಯ ದಂಡೆಯಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಅಯೋಧ್ಯೆ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸಬೇಕೆಂದು ಎರಡೂವರೆ ತಿಂಗಳ ಹಿಂದೆ ಸುಪ್ರೀಂಕೋರ್ಟ್ ಸಲಹೆ ನೀಡಿತ್ತು. ಈ ಬಿಕ್ಕಟ್ಟನ್ನು ಬಗೆಹರಿಸಲು ತಾನು ಮಧ್ಯಸ್ಥಿಕೆ ವಹಿಸುವ ಕೊಡುಗೆಯನ್ನು ಸಹ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೀಡಿದ್ದರು.







