ಮಲಬಾರ್ ನೌಕಾಭ್ಯಾಸದಿಂದ ಭಾರತ ದೂರ
ಚೀನಾ ಸ್ವಾಗತ

ಬೀಜಿಂಗ್, ಮೇ 31: ಈ ವರ್ಷದ ಮಲಬಾರ್ ನೌಕಾಭ್ಯಾಸದಲ್ಲಿ ಪಾಲ್ಗೊಳ್ಳುವಂತೆ ಆಸ್ಟ್ರೇಲಿಯ ಮಾಡಿರುವ ಮನವಿಯನ್ನು ಭಾರತ ತಿರಸ್ಕರಿಸಿರುವುದನ್ನು ಚೀನಾ ಬುಧವಾರ ಸ್ವಾಗತಿಸಿದೆ.
ಮಲಬಾರ್ ನೌಕಾಭ್ಯಾಸದಲ್ಲಿ ಸಾಮಾನ್ಯವಾಗಿ ಭಾರತ, ಜಪಾನ್ ಮತ್ತು ಅಮೆರಿಕ ಪಾಲ್ಗೊಳ್ಳುತ್ತಿದ್ದು, ಬಂಗಾಳ ಕೊಲ್ಲಿ, ಹಿಂದೂ ಮಹಾಸಾಗರ ಅಥವಾ ಪಶ್ಚಿಮ ಪೆಸಿಫಿಕ್ ಸಾಗರ ಪ್ರದೇಶದಲ್ಲಿ ಅಭ್ಯಾಸ ನಡೆಸಲಾಗುತ್ತದೆ.
ಸೇನಾ ಅಭ್ಯಾಸಗಳನ್ನು ನಡೆಸುವಾಗ ದೇಶಗಳ ಭದ್ರತಾ ಕಳವಳಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಚೀನಾದ ವಿದೇಶ ಸಚಿವಾಲಯ ಹೇಳಿದೆ.
''ಸೇನಾಭ್ಯಾಸದಲ್ಲಿ ಪಾಲ್ಗೊಳ್ಳಲು ಭಾರತ ನಿರಾಕರಿಸಿರುವುದಕ್ಕೆ ಸಂಬಂಧಿಸಿದ ವರದಿಗಳನ್ನು ನಾನು ನೋಡಿದ್ದೇನೆ. ಇದರ ಹಿಂದಿನ ಕಾರಣಗಳ ಬಗ್ಗೆ ಭಾರತಕ್ಕೆ ಸ್ಪಷ್ಟತೆಯಿದೆ ಎಂದು ನಾನು ಭಾವಿಸಿದ್ದೇನೆ'' ಎಂದು ಚೀನಾ ವಿದೇಶ ವ್ಯವಹಾರಗಳ ವಕ್ತಾರೆ ಹುವಾ ಚುನ್‌ಯಿಂಗ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಚೀನಾದ ಕೋಪಕ್ಕೆ ಗುರಿಯಾಗುವುದನ್ನು ತಪ್ಪಿಸುವುದಕ್ಕಾಗಿ, ಸೇನಾಭ್ಯಾಸದಲ್ಲಿ ಪಾಲ್ಗೊಳ್ಳುವಂತೆ ಆಸ್ಟ್ರೇಲಿಯ ಮಾಡಿದರುವ ಮನವಿಯನ್ನು ಭಾರತ ತಿರಸ್ಕರಿಸಿದೆ ಎಂಬುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ 'ರಾಯ್ಟರ್ಸ್' ಮಂಗಳವಾರ ವರದಿ ಮಾಡಿರುವುದನ್ನು ಸ್ಮರಿಸಬಹುದಾಗಿದೆ.







