ದೇವಾಡಿಗ ಯುವ ವೇದಿಕೆಯಿಂದ ಪ್ರತಿಭಾ ಪುರಸ್ಕಾರ, ಪರಿಕರ ವಿತರಣೆ
ಉಡುಪಿ, ಮೇ 31: ದೇವಾಡಿಗ ಯುವ ವೇದಿಕೆ ಉಡುಪಿ, ನಾದಶ್ರೀ ಸೇವಾ ಟ್ರಸ್ಟ್ ಉಡುಪಿ ಹಾಗೂ ಸೀತಾರಾಮ ಮಹಿಳಾ ಭಜನಾ ಮಂಡಳಿ ಉಡುಪಿ ಇವುಗಳ ಆಶ್ರಯದಲ್ಲಿ ದೇವಾಡಿಗ ಸಮಾಜದ ಪ್ರತಿಭಾನ್ವಿತ ಮಕ್ಕಳಿಗೆ ಸನ್ಮಾನ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಪರಿಕರಗಳ ವಿತರಣೆ ಜೂ.11ರಂದು ಕುಂಜಿಬೆಟ್ಟಿನ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ದೇವಾಡಿಗ ಯುವ ವೇದಿಕೆ ಅಧ್ಯಕ್ಷ ಪ್ರಭಾಕರ ಕೆ.ಎಸ್. ತಿಳಿಸಿದ್ದಾರೆ.
ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಈ ಬಾರಿ ಉಡುಪಿ ತಾಲೂಕು ಮಟ್ಟದಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿದ ತಲಾ 10 ಮಂದಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಅಲ್ಲದೇ 7ನೇ ತರಗತಿಯವರೆಗಿನ ಮಕ್ಕಳಿಗೆ ಶಾಲಾ ಪರಿಕರಗಳ ವಿತರಣೆ ನಡೆಯಲಿದೆ ಎಂದರು.
ಈ ಬಾರಿಯ ‘ದೇವಾಡಿಗ ಯುವ ಸಾಧಕ’ ಪ್ರಶಸ್ತಿಯನ್ನೂ ಅಂದು ಪ್ರದಾನ ಮಾಡಲಾಗುವುದು. 2017ರ ಪ್ರಶಸ್ತಿಗೆ ಕಬಡ್ಡಿ ಆಟಗಾರ ರಿಶಾಂಕ್ ದೇವಾಡಿಗ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಸಮಾಜದಲ್ಲಿ ಸೇವೆ ಸಲ್ಲಿಸಿದ ಗಣ್ಯರು ಹಾಗೂ ಸಮಾಜದ ಅಶಕ್ತರಿಗೆ ನೆರವು ವಿತರಣೆಯನ್ನೂ ಮಾಡಲಾಗುವುದು ಎಂದು ಪ್ರಭಾಕರ ತಿಳಿಸಿದ್ದಾರೆ.
ಈ ಬಾರಿ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಉಡುಪಿ ತಾಲೂಕು ಮಟ್ಟದ ವಿದ್ಯಾರ್ಥಿಗಳು ಅರ್ಜಿಯೊಂದಿಗೆ ಅಂಕಪಟ್ಟಿಯ ಪ್ರತಿಯನ್ನು ಮೊಬೈಲ್ ಸಂಖ್ಯೆಯೊಂದಿಗೆ ಸಲ್ಲಿಸುವಂತೆ ಅವರು ಹೇಳಿದ್ದಾರೆ. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪೋಷಕರ ವಿಳಾಸದೊಂದಿಗೆ ತಮ್ಮ ಆಧಾರ್ ಕಾರ್ಡಿನ ಪ್ರತಿಯನ್ನು ತಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಕಡ್ಡಾಯ ವಾಗಿ ಸಲ್ಲಿಸಬೇಕು.
ಅರ್ಜಿಗಳನ್ನು ಸಲ್ಲಿಸಲು ಜೂ.8 ಕೊನೆಯ ದಿನವಾಗಿರುತ್ತದೆ. ಭರ್ತಿ ಮಾಡಿದ ಅರ್ಜಿಗಳನ್ನು ದಾಖಲೆಗಳೊಂದಿಗೆ ನಾದಶ್ರೀ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಡಯಾನ ಥಿಯೇಟರ್ ಬಳಿ, ಕುಕ್ಕಿಕಟ್ಟೆ, ಉಡುಪಿ ಇಲ್ಲಿಗೆ ತಲುಪುವಂತೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಳಿಗಾಗಿ ದೂರವಾಣಿ: 0820-2530122, 9448177899 ಈ ಸಂಖ್ಯೆಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ವೇದಿಕೆ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ಕುಮಾರ್, ನಾದಶ್ರೀ ಸೇವಾಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಶ್ರೀಧರ್ ದೇವಾಡಿಗ, ಜೀವರತ್ನ ದೇವಾಡಿಗ, ಶಾರದಾ ದೇವಾಡಿಗ ಉಪಸ್ಥಿತರಿದ್ದರು







