ತಂದೆಯ ತಪ್ಪಿಗೆ ಸೂಕ್ತ ಶಿಕ್ಷೆ ವಿಧಿಸಿದ 5 ವರ್ಷದ ಬಾಲಕ: ವಿಡಿಯೋ ವೈರಲ್

ಅಮೆರಿಕಾ, ಮೇ 31: ತಂದೆ ಮಾಡಿದ ತಪ್ಪಿನ ಶಿಕ್ಷೆಯನ್ನು 5 ವರ್ಷದ ಪುತ್ರ ನಿರ್ಧರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಾಲಕನ ಸಮಯಪ್ರಜ್ಞೆಯ ಬಗ್ಗೆ ವ್ಯಾಪಕ ಪ್ರಶಂಸೆಗಳು ವ್ಯಕ್ತವಾಗುತ್ತಿದೆ.
ರೋಡ್ ಐಲ್ಯಾಂಡ್ ನ ಪ್ರೊವಿಡೆನ್ಸ್ ಮುನಿಸಿಪಲ್ ಕೋರ್ಟ್ ನ ನ್ಯಾಯಾಧೀಶರು 5ರ ಹರೆಯದ ಬಾಲಕ ಜಾಕಬ್ ಗೆ ಈ ವಿಶೇಷ ಅವಕಾಶ ನೀಡಿದವರು. ಜಾಕಬ್ ನ ತಂದೆ ತಪ್ಪಾದ ಜಾಗದಲ್ಲಿ ಕಾರು ಪಾರ್ಕಿಂಗ್ ಮಾಡಿದ್ದರ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ಈ ಸಂದರ್ಭ ಅಲ್ಲಿಗೆ ಬಾಲಕನೂ ಆಗಮಿಸಿದ್ದ. ಈ ಸಂದರ್ಭ ಆತನನ್ನು ಕಂಡ ನ್ಯಾಯಾಧೀಶರು ಚೇಂಬರ್ ಗೆ ಕರೆದು ತಂದೆಯ ತಪ್ಪಿಗೆ ಶಿಕ್ಷೆಯನ್ನು ನಿರ್ಧರಿಸುವಂತೆ ಹೇಳಿದ್ದಾರೆ.
“ನಿನ್ನ ತಂದೆಗೆ 90 ಡಾಲರ್ ದಂಡ ವಿಧಿಸಬಹುದು. ಅಥವಾ 30 ಡಾಲರ್ ವಿಧಿಸಬಹುದು. ಇಲ್ಲದಿದ್ದಲ್ಲಿ ಯಾವುದೇ ದಂಡ ವಿಧಿಸದೆ ಬಿಡುಗಡೆ ಮಾಡಬಹುದು. ನೀನು ಇವುಗಳಲ್ಲಿ ಯಾವುದನ್ನು ಆಯ್ಕೆ ಮಾಡುತ್ತೀಯ” ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ.
ಈ ಸಂದರ್ಭ ಬಾಲಕ ತಂದೆಗೆ ಯಾವುದೇ ದಂಡ ವಿಧಿಸುವುದು ಬೇಡ ಎನ್ನುತ್ತಾನೆ ಎಂದು ಎಲ್ಲರೂ ಭಾವಿಸಿದ್ದು, ಆದರೆ ಆತ ಪಕ್ಷಪಾತ ನಡೆಸದೆ 30 ಡಾಲರ್ ದಂಡ ವಿಧಿಸಿ ಎಂದು ಪ್ರತಿಕ್ರಿಯಿಸಿದ್ದಾನೆ. ಬಾಲಕನ ಉತ್ತರದಿಂದ ಸಂತಸಗೊಂಡ ನ್ಯಾಯಾಧೀಶರು ಆತನ ಬುದ್ಧಿಮತ್ತೆಯನ್ನು ಶ್ಲಾಘಿಸಿದ್ದಾರೆ.







