ಕಾರಿನ ಗಾಜು ಒಡೆದು ಸೊತ್ತು ಕಳವು
ಉಡುಪಿ, ಮೇ 31: ಕರಾವಳಿ ಬೈಪಾಸ್ ಬಳಿಯ ಶಾರದಾ ಇಂಟರ್ ನ್ಯಾಶನಲ್ ಹೊಟೇಲಿನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ಕಾರಿನ ಗಾಜು ಒಡೆದು ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಮಂಗಳೂರು ಕೈರಂಗಳದ ಛಾಯಾ ಚಿತ್ರಗ್ರಾಹಕ ಹೇಮಚಂದ್ರ ಎಂಬವರು ಶಾರದಾ ಹೊಟೇಲಿನ ಸಭಾಂಗಣದಲ್ಲಿ ನಡೆದ ಗೆಳೆಯನ ಮದುವೆಗೆಂದು ತನ್ನ ಕಾರಿನಲ್ಲಿ ಬಂದಿದ್ದರು. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಕಾರನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಮದುವೆ ಸಮಾರಂಭಕ್ಕೆ ತೆರಳಿದರು. ಮಧ್ಯಾಹ್ನ 3 ಗಂಟೆಗೆ ಮದುವೆ ಮುಗಿಸಿ ಬಂದು ನೋಡಿದಾಗ ಕಾರಿನ ಹಿಂದಿನ ಬಾಗಿಲಿನ ಗಾಜನ್ನು ಪುಡಿಗೈದಿರುವುದು ಕಂಡುಬಂತು.
ಕಳ್ಳರು ಕಾರಿನ ಒಳಗೆ ಬ್ಯಾಗ್‌ನಲ್ಲಿದ್ದ ಮೂರು ಹಾರ್ಡ್‌ಡಿಸ್ಕ್, ಮೂರು ಪೆನ್‌ಡ್ರೈವ್, ನಾಲ್ಕು ಮೆಮೋರಿ ಕಾರ್ಡ್, ಎಟಿಎಂ ಕಾರ್ಡ್, ಕಾರಿನ ದಾಖಲೆ ಗಳನ್ನು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ 10 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





