ಚಿರತೆ ದಾಳಿ: ಇಬ್ಬರಿಗೆ ಗಾಯ
ಕಾರ್ಕಳ, ಮೇ 31: ನಿಂಜೂರು ಗ್ರಾಮದಲ್ಲಿ ಚಿರತೆಯೊಂದು ದಾಳಿ ನಡೆ ಸಿದ ಪರಿಣಾಮ ಇಬ್ಬರು ವ್ಯಕ್ತಿಗಳು ಹಾಗೂ ಒಂದು ದನ ಗಾಯಗೊಂಡಿದೆ. ಇದೇ ವೇಳೆ ಚಿರತೆಯು ಆಹಾರ ಇಲ್ಲದೆ ನಿತ್ರಾಣಗೊಂಡು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಗಾಯಗೊಂಡವರನ್ನು ಬೈಲೂರಿನ ರಾಮ ಮೂಲ್ಯ (52) ಹಾಗೂ ನಿಂಜೂರು ಮಲ್ಲಿಬೆಟ್ಟುವಿನ ವೆಲೇರಿಯನ್ ಡಿಸೋಜ (55) ಎಂದು ಗುರುತಿಸಲಾಗಿದೆ.
ರಾಮ ಮೂಲ್ಯ ನಿಂಜೂರು ಗ್ರಾಮದ ಚಿತ್ರಬೈಲು ಕೋಡಿಮನೆಯ ಶೇಖರ್ ಶೆಟ್ಟಿ ಎಂಬವರ ಅಡಿಕೆ ತೋಟದಲ್ಲಿ ಮಣ್ಣಿನ ಕೆಲಸ ಮಾಡುತ್ತಿದ್ದಾಗ ಚಿರತೆಯು ಹಿಂದಿನಿಂದ ದಾಳಿ ಮಾಡಿತು. ಇದರಿಂದ ಬೆನ್ನು, ಕೈ, ತಲೆಗೆ ಗಾಯಗೊಂಡ ರಾಮ ಮೂಲ್ಯ ಅವರನ್ನು ಬೈಲೂರು ಆಸ್ಪತ್ರೆಗೆ ದಾಖಲಿಸಲಾಯಿತು.
ಅಲ್ಲಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿರುವ ಮಲ್ಲಿಬೆಟ್ಟು ಎಂಬಲ್ಲಿ ಇಂದು ಬೆಳಗ್ಗೆ ಅಪ್ಪಿ ಪೂಜಾರ್ತಿ ಎಂಬವರ ದನದ ಕೊಟ್ಟಿಗೆಗೆ ನುಗ್ಗಿದ ಅದೇ ಚಿರತೆ ದನದ ಮೇಲೆ ದಾಳಿ ಮಾಡಿತು. ಇದನ್ನು ನೋಡಿದ ಅಪ್ಪಿ ಪೂಜಾರ್ತಿ ಬೊಬ್ಬೆ ಹಾಕಿದರು. ಕೂಡಲೇ ಸ್ಥಳೀಯರು ಸೇರಿ ಚಿರತೆಯನ್ನು ಓಡಿಸುವ ಪ್ರಯತ್ನ ಮಾಡಿದರು.
ಆಗ ಚಿರತೆಯು ವೆಲೇರಿಯನ್ ಡಿಸೋಜ ಮೇಲೆ ಎರಗಿ ಅವರ ಕೈಗೆ ಗಾಯ ಮಾಡಿದೆ. ಗಾಯಗೊಂಡ ವಲೇರಿಯನ್ ಡಿಸೋಜ ಅವರನ್ನು ಉಡುಪಿ ಸರಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ದಾಳಿಯಿಂದ ದನದ ಮುಖಕ್ಕೆ ಗಾಯಗಳಾಗಿವೆ.
ಕೂಡಲೇ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಅಸ್ವಸ್ಥಗೊಂಡು ಬಿದ್ದಿದ್ದ ಚಿರತೆಯನ್ನು ಬಲೆ ಹಾಕಿ ಸೆರೆ ಹಿಡಿದರು. ಬಳಿಕ ಕಾರ್ಕಳ ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಚಿರತೆ ಮೃತಪಟ್ಟಿತು.
ಕಾರ್ಕಳ ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಪಶು ವೈದ್ಯರ ಪ್ರಕಾರ ಚಿರತೆಯು ಆಹಾರ ಇಲ್ಲದೆ ತ್ರಾಣದಿಂದ ಹಾಗೂ ಅನಾ ರೋಗ್ಯದಿಂದ ಮೃತಪಟ್ಟಿದೆ. ನಾಲ್ಕು ವರ್ಷದ ಈ ಹೆಣ್ಣು ಚಿರತೆ ಆಹಾರ ಇಲ್ಲದೆ ಹಸಿವಿನಿಂದ ಮನುಷ್ಯರ ಮೇಲೆ ದಾಳಿ ನಡೆಸಿದೆ ಎಂದು ಬೈಲೂರು ಉಪ ವಲಯ ಅರಣ್ಯಾಧಿಕಾರಿ ಉಕ್ರಪ್ಪ ಗೌಡ ತಿಳಿಸಿದ್ದಾರೆ.
ಮೃತ ಚಿರತೆಯ ಅಂತ್ಯ ಸಂಸ್ಕಾರವನ್ನು ಕಾರ್ಕಳ ವಲಯ ಅರಣ್ಯಾಧಿಕಾರಿ ಗಳ ಕಚೇರಿ ಆವರಣದಲ್ಲಿ ಇಂದು ಸಂಜೆ ವೇಳೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಕಳ ವಲಯ ಅರಣ್ಯಾಧಿಕಾರಿ ದಿನೇಶ್ ಜಿ.ಡಿ., ಅರಣ್ಯ ರಕ್ಷಕ ಪ್ರಕಾಶ್ ಉಪಸ್ಥಿತರಿದ್ದರು.







