ವಿಶ್ವ ತಂಬಾಕು ರಹಿತ ದಿನಾಚರಣೆ: ಹವ್ಯಾಸ, ಚಟವಾಗದಿರಲಿ: ಪ್ರಮೋದ್ ಮಧ್ವರಾಜ್

ಉಡುಪಿ, ಮೇ 31: ಕುತೂಹಲದಿಂದಾಗಲೀ, ಗೆಳೆತನದ ಒತ್ತಾಯ ದಿಂದಾಗಲೀ ಪ್ರಾರಂಗೊಳ್ಳುವ ಸಿಗರೇಟು ಮತ್ತು ಕುಡಿತದಂತಹ ಹವ್ಯಾಸ ಚಟವಾಗಿ ಮಾರ್ಪಟ್ಟರೆ ಅಮೂಲ್ಯವಾದ ಯುವ ಸಂಪತ್ತು ನಾಶವಾಗುತ್ತದೆ ಎಂದು ರಾಜ್ಯ ಮೀನುಗಾರಿಕೆ, ಯುವಜನಸಬಲೀಕರಣ ಮತ್ತು ಕ್ರೀಡಾ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮ್ವರಾಜ್ ಹೇಳಿದ್ದಾರೆ.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಮತ್ತು ನಿಷೇಧ ಕೋಶ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಚಿಟ್ಪಾಡಿಯ ಸೈಂಟ್ ಮೇರೀಸ್ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ನಡೆದ ವಿಶ್ವ ತಂಬಾಕು ರಹಿತ ದಿನ-2017 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮಾನವ ಸಂಪನ್ಮೂಲಕ್ಕೆ ಇಂದು ಎಲ್ಲಕ್ಕಿಂತ ಹೆಚ್ಚಿನ ವೌಲ್ಯವಿದ್ದು, ವಿದ್ಯಾರ್ಥಿ ಗಳು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವ ಜೊತೆ ಎಲ್ಲಾ ವಿಷಯಗಳಲ್ಲೂ ಹತೋಟಿ ಮೀರದಂತೆ ವರ್ತಿಸುವುದರಿಂದ ವಿದ್ಯಾರ್ಥಿ ಶಕ್ತಿ ಉತ್ತಮ ಮಾನವ ಸಂಪನ್ಮೂಲವಾಗಿ ಪರಿವರ್ತನೆಗೊಂಡು ದೇಶ ಪ್ರಗತಿಯತ್ತ ಸಾಗಲಿದೆ ಎಂದರು.
ರಾಜ್ಯ ಸರಕಾರ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿರಿಸಿ ಇತ್ತೀಚೆಗೆ ಕೌಶಲ್ಯ ಹೆಚ್ಚಿಸಿ ತರಬೇತಿ ನೀಡಲು - kaushalkar.com-ಆರಂಭಿಸಿದ್ದು, ಯುವಜನತೆ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂದು ಪ್ರಮೋದ್ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ ಸಂಪನ್ಮೂಲ ವ್ಯಕ್ತಿಗಳಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗೀಯ ಸಂಯೋಜಕ ಮಹಾಂತೇಶ್ ಬಿ.ಯು. ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರೋಹಿಣಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.







