ಬೆಳ್ತಂಗಡಿ: ನೂತನ ರಸ್ತೆ, ಸೇತುವೆ ಉದ್ವಾಟನೆ

ಬೆಳ್ತಂಗಡಿ, ಮೇ 31: ಕಳೆದ ಮೂರು ದಶಕದಲ್ಲಿ ತಾಲೂಕಿನ 81 ಗ್ರಾಮಗಳಲ್ಲಿ ರಸ್ತೆ, ಸೇತುವೆ, ವಿದ್ಯುತ್ ಇನ್ನಿತರ ಮೂಲಭೂತ ಸೌಕರ್ಯಗಳು ರಾಜ್ಯದಲ್ಲೆ ದಾಖಾಲೆಯ ಮಟ್ಟದಲ್ಲಿ ಅಭಿವೃದ್ಧಿ ಹೊಂದಿದ್ದು ಪುದುವೆಟ್ಟು ಭಾಗದ ಜನರ 35 ವರ್ಷಗಳ ಹಿಂದಿನ ಬೇಡಿಕೆಯಾದ ಸೇತುವೆ ಇಂದು ಉದ್ಘಾಟನೆಗೊಳಿಸಲು ಸಂತೋಷವಾಗಿತ್ತಿದೆ. ಇದೇ ರೀತಿ ತಾಲೂಕಿನ ಇತರ ಗ್ರಾಮಗಳ ಉಳಿದ ಬೇಡಿಕೆಯನ್ನು ಈಡೇರಿಸಲು ಬದ್ದನಾಗಿದ್ದು ಮುಂದಿನ 11 ತಿಂಗಳ ಅವಧಿಯಲ್ಲಿ 100 ಕೋ. ಅನುದಾನ ಮಂಜೂರುಗೊಳಿಸಲು ಪ್ರಯತ್ನಿಸುವುದಾಗಿ ರಾಜ್ಯ ಸಣ್ಣ ಕೈಗಾರಿಕ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಕೆ. ವಸಂತ ಬಂಗೇರ ಹೇಳಿದ್ದಾರೆ.
ಅವರು ಬುಧವಾರ ಪುದುವೆಟ್ಟು ಮೇಲಡ್ಕ-ಸುರುಳಿ-ಬೊಳ್ಮನಾರು-ಮುರುಬರಿ 5.3ಕೀ.ಮಿ ರಸ್ತೆ ಹಾಗೂ 100 ಮೀ ಉದ್ದದ 7.5 ಕೋ.ರೂ ವೆಚ್ಚದ ರಸ್ತೆ ಹಾಗೂ ಸೇತುವೆಯನ್ನು ಉದ್ಘಾಟಿಸಿ ಮಾತನಾಡಿ ತಾಲೂಕಿನ ಪ್ರತಿಯೊಂದು ಗ್ರಾಮಕ್ಕೆ ಹಾಗೂ ಪ್ರತಿ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದ್ದು ಅದರಂತೆ ರಸ್ತೆ ಇನ್ನಿತರ ಮೂಲಭೂತ ಸೌಕರ್ಯಗಳಿಗೂ ಆದ್ಯತೆ ನೀಡಿದ್ದೆನೆ. ತಾಲೂಕಿನ ಜನರ ಹಾಗೂ ಇನ್ನಿತರ ಅಭಿವೃದ್ಧಿ ಜವಾಬ್ದಾರಿ ಈ ಭಾಗದ ಶಾಸಕನಾಗಿ ನನ್ನ ಕರ್ತವ್ಯವಾಗಿದ್ದು ಯಾವುದೇ ಭ್ರಷ್ಟಚಾರಕ್ಕೆ ಅವಕಾಶ ನೀಡದೆ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದ ಫಲವಾಗಿ 5 ಬಾರಿ ಶಾಸಕನಾಗಿ ಆಯ್ಕೆಯಾಗಲು ತಾಲೂಕಿನ ಜನತೆ ಆಶಿರ್ವಾದಿಸಿದ್ದಾರೆ. ಈಗಾಗಲೇ ತಾಲೂಕಿನ ಪ್ರಮುಖ ಬೇಡಿಕೆಯ 25 ಕೋ. ಅನುದಾನಕ್ಕೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಕಳುಹಿಸಲಾಗಿದ್ದು ಮುಂದಿನ 75 ಕೋ.ಅನುದಾನಕ್ಕೆ ಶೀಘ್ರವೇ ಪ್ರಸ್ತಾವನೆ ಕಳುಹಿಸಲಾಗುವುದು. ತಾಲೂಕಿನ ಅಭಿವೃದ್ಧಿ ಬಗ್ಗೆ ತಾಲೂಕಿನ ಜನರೆ ಅರಿತುಕೊಳ್ಳಬೇಕು ಎಂದರು.
ಬೊಳ್ಮನಾರು ಮುಹಿಯುದ್ದಿನ್ ಜುಮಾ ಮಸೀದಿಯ ಧರ್ಮಗುರು ಮುಹಿಯುದ್ದಿನ್ ಝುಹುರಿ ಮಾತನಾಡಿ ಪುದುವೆಟ್ಟು ಭಾಗಕ್ಕೆ ಸೇತುವೆ ರಸ್ತೆ ಮಂಜೂರಾಗಿರುವುದರಿಂದ ಈ ಭಾಗದ ಜನರಿಗೆ ತುಂಬಾ ಪ್ರಯೋಜನವಾಗಿದೆ ಇದಕ್ಕೆ ಶ್ರಮಿಸಿದ ಶಾಸಕ ಕೆ. ವಸಂತ ಬಂಗೇರ ಮತ್ತು ಎಲ್ಲರನ್ನೂ ಅಭಿನಂದಿಸುವುದಾಗಿ ತಿಳಿಸಿದರು.
ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನ ಮಿಯ್ಯಾರು ಇದರ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ ಪ್ರಭು ಮಾತನಾಡಿ ಶಾಸಕ ಕೆ.ವಸಂತ ಬಂಗೇರರ ಅವಧಿಯಲ್ಲಿ ತಾಲೂಕು ಕಂಡರಿಯದ ಅಭಿವೃದ್ಧಿ ಕಂಡಿದ್ದು ವಿಶೇಷವಾಗಿ ಪುದುವೆಟ್ಟು ಭಾಗಕ್ಕೆ ಹೆಚ್ಚು ಪ್ರಯೋಜನವಾಗಿದೆ. ಇಂತವರು ಶಾಸಕರಾದರೆ ತಾಲೂಕಿನ ಅಭಿವೃದ್ಧಿ ಸಾಧ್ಯ ಮುಂದಿನ ಎರಡು ಅವಧಿಯಲ್ಲಿ ಕೆ.ವಸಂತ ಬಂಗೇರರು ಶಾಸಕರಾಗಿ ಆಯ್ಕೆಯಾಗಲಿ ಎಂದರು.
ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷ ಚಂದನ್ ಕಾಮತ್, ತಾ.ಪಂ ಸದಸ್ಯ ಸೆಬಸ್ಟಿಯಾನ್, ಎ.ಪಿ.ಎಂ.ಸಿ ಸದಸ್ಯ ಅಬ್ದುಲ್ ಗಫೂರ್ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಸಮಗ್ರ ಅಭಿವೃದ್ದಿಗೆ ಕಾಣರಾದ ಶಾಸಕ ಕೆ. ವಸಂತ ಬಂಗೇರರವರನ್ನು ಗ್ರಾಮಸ್ಥರು ಬೆಳ್ಳಿಯ ಕೀರಿಟ ತೊಡಿಸಿ ಸನ್ಮಾನಿಸಿದರು. ಪುದುವೆಟ್ಟು ಗ್ರಾ.ಪಂ ಅಧ್ಯಕ್ಷೆ ನೀಲಮ್ಮ ಅಧ್ಯಕ್ಷತೆ ವಹಿಸಿದ್ದರು.
ಬೊಳ್ಮನಾರು ಸೈಂಟ್ ಮೇರಿಸ್ ಚರ್ಚ್‌ನ ಧರ್ಮಗುರು ಫಾ. ಜೋಸ್, ಜಿ.ಪಂ ಸದಸ್ಯೆ ನಮಿತಾ ಗ್ರಾ.ಪಂ ಸದಸ್ಯರುಗಳಾದ ನಾರಾಯಣ, ಲಿಂಗಪ್ಪ ಸಾಲಿಯಾನ್, ಸುಜಾತ, ವಾರಿಜಾ, ಮಂಜುಳ, ವಸಂತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರೋಜಿನಿ ಉಪಸ್ಥಿತರಿದ್ದರು.
ಗ್ರಾ.ಪಂ ಸದಸ್ಯ ಕೆ.ಜೆ ಜೋಸೆಫ್ ಯಾನ್ ರೊಯಿ ಸ್ವಾಗತಿಸಿ ಉಪಾಧ್ಯಕ್ಷ ಬೊಮ್ಮಣ ಗೌಡ ವಂದಿಸಿದರು. ವಸಂತ ಪೂಜಾರಿ ಪುದುವೆಟ್ಟು ಕಾರ್ಯಕ್ರಮ ನಿರೂಪಿಸಿದರು.







