ನಗರೀಕರಣದಿಂದ ಪರಿಸರ ನಾಶ: ಕಳವಳ

ಪಡುಬಿದ್ರೆ, ಮೇ 31: ರಾಜ್ಯದಲ್ಲಿ ಪ್ರತೀ ನಿಮಿಷಕ್ಕೆ 2.5 ಎಕರೆ ಮರಗಳ ನಾಶವಾಗುತ್ತಿದೆ. ನಗರೀಕರಣ, ಬೃಹತ್ ಕೆರೆಗಳ ಒತ್ತುವರಿಯಿಂದ ಜಲಕ್ಷಾಮ ಹೆಚ್ಚಾಗುತ್ತಿದೆ ಎಂದು ಜಲ ಸಂರಕ್ಷಕ ಜೋಸೆಫ್ ಡಿಸಿಲ್ವಾ ಆತಂಕ ವ್ಯಕ್ತಪಡಿಸಿದರು.
ಅವರು ಮಂಗಳವಾರ ಪಡುಬಿದ್ರೆ ಗ್ರಾಮ ಪಂಚಾಯತ್, ರೋಟರಿ ಕ್ಲಬ್, ಅಂಗನವಾಡಿ ಕೇಂದ್ರ, ಸ್ವಸಹಾಯ ಸಂಘ ಹಾಗೂ ಸ್ತ್ರೀಶಕ್ತಿ ಗುಂಪಿನ ಸಹಯೋಗದಲ್ಲಿ ಬೋರ್ಡ್ ಶಾಲಾ ಅಂಗನವಾಡಿ ಕೇಂದ್ರದಲ್ಲಿ ನಡೆದ ಮಳೆ ನೀರಿನೊಂದಿಗೆ ಅನುಸಂಧಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಅತೀ ಹೆಚ್ಚು ಮಳೆ ಬೀಳುವ ಎರಡನೇ ಸ್ಥಾನದಲ್ಲಿ ಉಡುಪಿ ಜಿಲ್ಲೆ ಇದ್ದರೂ, ಇಲ್ಲಿ ಜಲಕ್ಷಾಮ ತೀವ್ರವಾಗಿದೆ. ಮಳೆ ನೀರನ್ನು ಹಿಂಗಿಸುವ ಕಾರ್ಯ ನಡೆಯಬೇಕು. ಪ್ರತಿ ಮನೆಗಳಲ್ಲಿ ಮಳೆ ನೀರು ಕೊಯ್ಲು, ಇಂಗು ಗುಂಡಿಗಳ ನಿರ್ಮಾಣವಾಗಬೇಕು. ಸಂಘ ಸಂಸ್ಥೆಗಳ ನೆರವಿನಿಂದ ಬತ್ತಿದ ಕೊಳವೆ ಬಾವಿಗಳಿದ್ದಲ್ಲಿ ಸಮರ್ಪಕವಾದ ರೀತಿಯಲ್ಲಿ ಜಲ ಮರುಪೂರಣ ಮಾಡುವ ಯೋಜನೆ ಹಾಕಿಕೊಳ್ಳಬೇಕು ಎಂದರು.
ಭಾರತದಲ್ಲಿ ನೀರಿನ ಬಾಟಲಿ ಮಾರಾಟದಿಂದ 60 ಲಕ್ಷ ರೂ. ಕೋಟಿ ವಹೀವಾಟು ನಡೆಯುತ್ತಿದೆ. ಮಾನವನ ಜೀವಕ್ಕೆ ನೀರು ಅತೀ ಮುಖ್ಯವಾಗಿ ಬೇಕಿದ್ದರೂ ಇಂದು ಉಳ್ಳವರ ಪಾಲಾಗುತ್ತಿದೆ ಎಂದ ಅವರು, ಕಾಟಚಾರಕ್ಕೆ ಬೇರೆ ದಿನ ವನ ಮಹೋತ್ಸವ ಆಚರಿಸಿ ಗಿಡಗಳನ್ನು ಕೊಲ್ಲುವ ಬದಲು ಜೂನ್ 5 ರ ವಿಶ್ವ ಪರಿಸರ ದಿನದಂದು ವನ ಮಹೋತ್ಸವ ಆಚರಿಸಿದರೆ ಒಳಿತಾಗಲಿದೆ ಎಂದು ಹೇಳಿದರು.
ಪಡುಬಿದ್ರೆ ಗ್ರಾಮ ಪಂ. ಅಭಿವೃದ್ಧಿ ಅಧಿಕಾರಿ ಪಂಚಾಕ್ಷರಿ ಕೇರಿಮಠ ಮಾತನಾಡಿ, ಹೊಸ ಮನೆಗಳಿಗೆ ಮಳೆ ನೀರು ಕೊಯ್ಲು ನಿರ್ಮಾಣ ಕಡ್ಡಾಯ ಮಾಡಿ ಕಟ್ಟುನಿಟ್ಟಿನ ಕಾನೂನನ್ನು ರಾಜ್ಯ ಸರಕಾರ ರೂಪಿಸಬೇಕು. ಶಾಲಾ ಪಠ್ಯಗಳಲ್ಲಿ ಜಲ ಸಂರಕ್ಷಣೆ ಕುರಿತ ಪಠ್ಯಗಳನ್ನು ಅಳವಡಿಸಲು ಸರಕಾರ ಮುಂದಾಗಬೇಕು ಎಂದರು.
ಪಡುಬಿದ್ರೆ ಗ್ರಾಮ ಪಂ. ಅಧ್ಯಕ್ಷೆ ದಮಯಂತಿ ಅಮೀನ್ ಕಾರ್ಯಕ್ರಮ ಉದ್ಘಾಟಿಸಿದರು. ರೋಟರಿ ಕ್ಲಬ್ ಅಧ್ಯಕ್ಷ ಅಬ್ದುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂ. ಉಪಾಧ್ಯಕ್ಷ ವೈ. ಸುಕುಮಾರ್, ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ರಮೀಝ್ ಹುಸೈನ್, ಕಾರ್ಯದರ್ಶಿ ಸಂದೀಪ್ ಪಲಿಮಾರ್, ಅಂಗನವಾಡಿ ಶಿಕ್ಷಕಿ ವಾಣಿ, ಸ್ತ್ರೀಶಕ್ತಿ ಸಂಘದ ಸರಳಾ ಉಪಸ್ಥಿತರಿದ್ದರು.







