ಸೆವೆಲಿ ಕೋಮುಗಲಭೆ ಪ್ರಕರಣ: ಓರ್ವನಿಗೆ ಜೀವಾವಧಿ, ಮೂವರಿಗೆ 10 ವರ್ಷ ಜೈಲು

ಜಲ್ನಾ,ಮೇ 31: 2008ರಲ್ಲಿ ಇಲ್ಲಿಗೆ ಸಮೀಪದ ಸೆವೆಲಿಯಲ್ಲಿ ಗಲಭೆ ಹಾಗೂ ಇಬ್ಬರ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿ ಜಲ್ನಾ ನ್ಯಾಯಾಲಯವು ಓರ್ವನಿಗೆ ಜೀವಾವಧಿ ಶಿಕ್ಷೆ ವಿಧಿಸಿ, ತೀರ್ಪು ನೀಡಿದೆ. ಇತರ ಮೂವರಿಗೆ 10 ವರ್ಷಗಳ ಕಠಿಣ ಕಾರಾಗೃಹವಾಸ ಮತ್ತು ಇತರ 17 ಮಂದಿಗೆ ಒಂದು ವರ್ಷದ ಜೈಲು ಶಿಕ್ಷೆಯನ್ನು ಘೋಷಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಹಾಗೂ ಸೆಶನ್ಸ್ ನ್ಯಾಯಾಧೀಶ ಎಸ್.ಎಸ್.ಕೋಸಂ ಕುಮಾರ್ ಮಂಗಳವಾರ ಒಟ್ಟು 21 ಮಂದಿಯನ್ನು ದೋಷಿಗಳೆಂದು ಪರಿಗಣಿಸಿದ್ದು, ಇತರ 10 ಮಂದಿಯನ್ನು ದೋಷಮುಕ್ತಗೊಳಿಸಿದ್ದರು.
ಪ್ರಕರಣದ ಪ್ರಮುಖ ಆರೋಪಿ ಶೇಖ್ ಖಾಜಾ ಖುರೈಷಿ (31)ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಆತನಿಗೆ ಹಾಗೂ 10 ವರ್ಷಗಳ ಜೈಲು ಶಿಕ್ಷೆ ಘೋಷಿಸಲ್ಪಟ್ಟ ಇತರ ಮೂವರಿಗೆ ತಲಾ 5 ಸಾವಿರ ರೂ. ಮತ್ತು ಇತರ 17 ಮಂದಿ ದೋಷಿಗಳಿಗೂ ತಲಾ 7700 ರೂ. ದಂಡ ವಿಧಿಸಲಾಗಿದೆ.
2008ರ ಎಪ್ರಿಲ್ 3ರಂದು ಸೆವೆಲಿಯಲ್ಲಿರುವ ಪಾನ್ ಅಂಗಡಿಯೊಂದರಲ್ಲಿ ಆಕ್ಷೇಪಾರ್ಹ ಹಾಡೊಂದನ್ನು ನುಡಿಸಿದ ಹಿನ್ನೆಲೆಯಲ್ಲಿ ಕೋಮುಗಲಭೆ ಭುಗಿಲೆದ್ದಿತ್ತು.
ಹಿಂಸಾಚಾರದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಇತರ ಐದು ಮಂದಿ ಗಾಯಗೊಂಡಿದ್ದಾರೆ. ಗಲಭೆಗೆ ಸಂಬಂಧಿಸಿ ಪೊಲೀಸರು 33 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದು, ಅವರಲ್ಲಿ ಇಬ್ಬರು ವಿಚಾರಣೆ ವೇಳೆ ಮೃತಪಟ್ಟಿದ್ದರು.







