ಉಳ್ಳಾಲ: ಕೋಮು ಘರ್ಷಣೆ ಪ್ರಕರಣ; ನಿರಪರಾಧಿಗಳ ಮೇಲಿನ ಕೇಸ್ ಶೀಘ್ರ ವಾಪಸ್?
ಮಂಗಳೂರು, ಮೇ 31: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿ ಕೋಟೆಪುರ ಮತ್ತು ಮೊಗವೀರಪಟ್ಣದಲ್ಲಿ ಮೂರುವರೆ ವರ್ಷಗಳ ಹಿಂದೆ ನಡೆದ ಕೋಮು ಘರ್ಷಣೆಗೆ ಸಂಬಂಧಿಸಿ ಪೊಲೀಸರಿಂದ ಬಂಧಿಸಲ್ಪಟ್ಟವರ ಮೇಲಿನ ಪ್ರಕರಣವನ್ನು ಸರಕಾರ ಹಿಂಪ ಡೆಯಲಿದ್ದು, ಈ ಬಗ್ಗೆ ಆದೇಶವು ಶೀಘ್ರ ಹೊರ ಬೀಳಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
2013ರ ಡಿಸೆಂಬರ್ ತಿಂಗಳಲ್ಲಿ ಕೆಲವು ಯುವಕರ ನಡುವೆ ಜಗಳ ಉಂಟಾಗಿ ಹೊಡೆದಾಟ ನಡೆದಿತ್ತು. ಬಳಿಕ ಯುವಕರ ನಡುವಿನ ಈ ಜಗಳ ಕೋಮುಬಣ್ಣ ಪಡೆದುಕೊಂಡಿತ್ತು. ಪರಿಣಾಮವಾಗಿ ಕೋಡಿ ಕೋಟೆಪುರ ಮತ್ತು ಮೊಗವೀರಪಟ್ಣಗಳಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಸಹೋದರತೆ ಮತ್ತು ಸೌಹಾರ್ದದಿಂದ ಬಾಳುತ್ತಿದ್ದ ಮುಸ್ಲಿಮರು ಮತ್ತು ಮೊಗವೀರರ ನಡುವೆ ವೈಷಮ್ಯ ಬೆಳೆದಿತ್ತು. ಬಳಿಕ ಸಚಿವ ಯು.ಟಿ.ಖಾದರ್ ನೇತೃತ್ವದಲ್ಲಿ ಹಲವು ಸಭೆಗಳು ನಡೆದಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲೂ ಸರ್ವಧರ್ಮ ಸಭೆಗಳನ್ನು ಕರೆಯಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗದೆ, 2014ರ ಜನವರಿಯವರೆಗೂ ಸಣ್ಣ ಪುಟ್ಟ ಅಹಿತಕರ ಘಟನೆಗಳು ಮುಂದುವರಿದಿದ್ದವು.
ಘಟನೆಯ ಬಳಿಕ ಪೊಲೀಸರು ಕೋಡಿ ಕೋಟೆಪುರ ಮತ್ತು ಮೊಗವೀರ ಪಟ್ಣಗಳಲ್ಲಿ ರಾತ್ರೋರಾತ್ರಿ ಮನೆಗಳಿಗೆ ನುಗ್ಗಿ ದೌರ್ಜನ್ಯ ಎಸಗಿದ್ದಾರೆ ಹಾಗೂ ಹಲವರನ್ನು ವಶಕ್ಕೆ ಪಡೆದಿದ್ದರು ಎಂದು ಆರೋಪಿಸಲಾಗಿತ್ತು. ಪೊಲೀಸರು ವಶಕ್ಕೆ ಪಡೆದವರಲ್ಲಿ ಹೆಚ್ಚಿನವರು ಮುಸ್ಲಿಮ್ ಯುವಕರಾಗಿದ್ದು, ನಿರಪರಾಧಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದೂ ಪೊಲೀಸರ ವಿರುದ್ಧ ಆರೋಪಗಳು ಕೇಳಿಬಂದಿದ್ದವು. ಈ ವಿಚಾರವಾಗಿ ಸ್ಥಳೀಯರು ಆ ವೇಳೆ ಸಚಿವ ಯು.ಟಿ.ಖಾದರ್‌ರನ್ನು ಭೇಟಿ ಮಾಡಿ ನಿರಪರಾಧಿಗಳ ಬಿಡುಗಡೆಗೆ ಆಗ್ರಹಿಸಿದ್ದರು. ನಿರಪರಾಧಿಗಳಿಗೆ ಅನ್ಯಾ ಯವಾಗದಂತೆ ನೋಡಿಕೊಳ್ಳುವುದಾಗಿ ಖಾದರ್ ಈ ವೇಳೆ ಭರವಸೆ ನೀಡಿದ್ದರು.
2013ರಲ್ಲಿ ನಡೆದ ಘಟನೆಗೆ ಸಂಬಂ ಧಿಸಿ ಪೊಲೀಸರು ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿರಲಿಲ್ಲ. ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ಅವಕಾಶ ನೀಡುವಂತೆ ಪೊಲೀಸರು ಸರಕಾರವನ್ನು ಕೇಳಿದ್ದರು. ಆದರೆ, ಯು.ಟಿ.ಖಾದರ್ ಈ ಬಗ್ಗೆ ಗೃಹ ಸಚಿವರೊಂದಿಗೆ ಚರ್ಚಿಸಿ ಬಂಧಿತರಲ್ಲಿ ಹೆಚ್ಚಿನ ಮುಸ್ಲಿಮ್ ಯುವಕರು, ಮೊಗವೀರರು ನಿರಪರಾಧಿಗಳಾಗಿದ್ದು, ವಿದ್ಯಾರ್ಥಿಗಳು ಮತ್ತು ಹಿರಿಯರಾಗಿದ್ದಾರೆ. ಆದ್ದರಿಂದ ಅವರ ಭವಿಷ್ಯದ ಹಿತದೃಷ್ಟಿಯಿಂದ ಮತ್ತು ಪರಿಸರದ ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ಅವಕಾಶ ನೀಡದಂತೆ ಗೃಹಸಚಿವರನ್ನು ಒತ್ತಾ ಯಿಸಿದ್ದರು. ಖಾದರ್‌ರ ಮನವಿಗೆ ಸ್ಪಂದಿಸಿದ ಗೃಹ ಸಚಿವರು ಚಾರ್ಜ್‌ಶೀಟ್ ಹಾಕಲು ಪೊಲೀಸರಿಗೆ ಅವಕಾಶ ನೀಡಿಲ್ಲ ಎಂದು ತಿಳಿದುಬಂದಿದೆ.