ಭಾರತ-ಪಾಕಿಸ್ತಾನ ಪಂದ್ಯ: ಉಭಯ ಆಟಗಾರರನ್ನು ಕೆರಳಿಸಿದ ಘಟನೆಗಳು

ಹೊಸದಿಲ್ಲಿ, ಮೇ 31: ಭಾರತ-ಪಾಕಿಸ್ತಾನ ನಡುವಿನ ಪಂದ್ಯಗಳು ಯಾವಾಗಲೂ ಹೈ-ವೋಲ್ಟೇಜ್‌ನಿಂದ ಕೂಡಿರುತ್ತದೆ. ಉಭಯ ತಂಡಗಳ ಪಂದ್ಯ ಕಾವೇರಿದ ವಾತಾವರಣದಲ್ಲಿ ನಡೆಯುತ್ತದೆ. ಜೂ.4 ರಂದು ಇಂಗ್ಲೆಂಡ್‌ನಲ್ಲಿ ಮತ್ತೊಮ್ಮೆ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗಲಿವೆ. ಭಾರತ ಹಾಗೂ ಪಾಕಿಸ್ತಾನ ಆಟಗಾರರು ಪಾಲ್ಗೊಂಡಿದ್ದ ಕಾವೇರಿದ ಘಟನೆಯ ಇಣುಕು ನೋಟಿ ಇಲ್ಲಿದೆ..
ಜಾವೆದ್ ಮಿಯಾಂದಾದ್-ಕಿರಣ್ ಮೋರೆ:
ಜಾವೆದ್ ಮಿಯಾಂದಾದ್ ಪಾಕ್‌ನ ಆಕ್ರಮಣಕಾರಿ ವ್ಯಕ್ತಿತ್ವದ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಮಿಯಾಂದಾದ್ 90ರ ದಶಕದಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಪ್ರಮುಖ ಆಟಗಾರನಾಗಿದ್ದರು.
1992ರ ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಕಿರಣ್ ಮೋರೆ ಅವರು ಪದೇ ಪದೇ ಮಿಯಾಂದಾದ್ ವಿರುದ್ಧ ಔಟ್‌ಗಾಗಿ ಅಂಪೈರ್‌ಗೆ ಮನವಿ ಮಾಡಿದ್ದರು. ಇದರಿಂದ ಹತಾಶಗೊಂಡಿದ್ದ ಮಿಯಾಂದಾದ್ ಮೊದಲಿಗೆ ಅಂಪೈರ್‌ಗೆ ದೂರು ನೀಡಿದ್ದರು. ಮೋರೆ ಮತ್ತೊಮ್ಮೆ ತನ್ನ ವಿರುದ್ಧ ಔಟ್‌ಗೆ ಮನವಿ ಮಾಡಿದ್ದಾಗ ಮಿಯಾಂದಾದ್ ಕ್ರೀಸ್‌ನಲ್ಲೇ ನಿಂತು ಬ್ಯಾಟ್‌ನ್ನು ಹಿಡಿದುಕೊಂಡು ಮೂರು ಬಾರಿ ಜಿಗಿದರು.
ವೆಂಕಟೇಶ್ ಪ್ರಸಾದ್-ಆಮಿರ್ ಸೊಹೈಲ್:
ವೆಂಕಟೇಶ್ ಪ್ರಸಾದ್ ಭಾರತೀಯ ಕ್ರಿಕೆಟ್ ತಂಡದ ಓರ್ವ ಶಾಂತಚಿತ್ತದ ಬೌಲರ್. 1996ರ ವಿಶ್ವಕಪ್‌ನಲ್ಲಿ ಭಾರತ ತಂಡ ಅಜಯ್ ಜಡೇಜ ಸಿಡಿಸಿದ್ದ ಶತಕದ ನೆರವಿನಿಂದ ಪಾಕ್‌ಗೆ 288 ರನ್ ಗುರಿ ನೀಡಿತ್ತು. ಪಾಕ್ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಆಮಿರ್ ಸೊಹೈಲ್ ಹಾಗೂ ಸಯೀದ್ ಅನ್ವರ್ ಭಾರತದ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿ ಪಾಕ್‌ಗೆ ಭರ್ಜರಿ ಆರಂಭ ನೀಡಿದ್ದರು. ಪ್ರಸಾದ್ ಎಸೆತದಲ್ಲಿ ಕೆಲವು ಬೌಂಡರಿಗಳನ್ನು ಬಾರಿಸಿದ ಸೊಹೈಲ್, ಪ್ರಸಾದ್‌ರನ್ನು ಕೆಣಕಿದರು. ಪ್ರಸಾದ್ ಮುಂದಿನ ಎಸೆತದಲ್ಲಿ ಸೊಹೈಲ್‌ರನ್ನು ಕ್ಲೀನ್‌ಬೌಲ್ಡ್ ಮಾಡಿದ್ದರು. ಸೊಹೈಲ್ ವಿಕೆಟ್ ಪಂದ್ಯದ ಟರ್ನಿಂಗ್ ಪಾಯಿಂಟ್ ಆಗಿದ್ದು, ಭಾರತ ಆ ಪಂದ್ಯವನ್ನು ಸುಲಭವಾಗಿ ಜಯಿಸಿತ್ತು.
ಕಮ್ರಾನ್ ಅಕ್ಮಲ್-ಗೌತಮ್ ಗಂಭೀರ್: ಗೌತಮ್ ಗಂಭೀರ್ ಕ್ರಿಕೆಟ್‌ನ್ನು ಅತ್ಯಂತ ಅಭಿಮಾನದಿಂದ ಆಡುವ ಆಟಗಾರನಾಗಿದ್ದಾರೆ. 2010ರ ಏಷ್ಯಾಕಪ್ ಸೆಮಿಫೈನಲ್ ಪಂದ್ಯದಲ್ಲಿ ಪಾಕ್ ವಿಕೆಟ್‌ಕೀಪರ್ ಕಮ್ರಾನ್ ಅಕ್ಮಲ್ ಅವರು ಗಂಭೀರ್ ಔಟ್‌ಗಾಗಿ ಜೋರಾಗಿ ಮನವಿ ಮಾಡಿದ್ದರು. ಅಕ್ಮಲ್ ವರ್ತನೆ ಗಂಭೀರ್ ಇಷ್ಟವಾಗಲಿಲ್ಲ. ಈ ಇಬ್ಬರು ಆಟಗಾರರು ಪರಸ್ಪರ ವಾಕ್ಸಮರ ನಡೆಸಿದ್ದರು.
ಪಾನೀಯ ವಿರಾಮದ ವೇಳೆಯೂ ಈ ಇಬ್ಬರು ಆಟಗಾರರ ಮಾತಿನ ಚಕಮಕಿ ಮುಂದುವರಿದಿತ್ತು. ಅಂಪೈರ್ ಬಿಲ್ಲಿ ಬೌಡೆನ್ ಹಾಗೂ ಭಾರತದ ನಾಯಕ ಎಂಎಸ್ ಧೋನಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿ ಇಬ್ಬರು ಅಟಗಾರರನ್ನು ಬೇರ್ಪಡಿಸಿದರು.
ಶಾಹಿದ್ ಅಫ್ರಿದಿ-ಗೌತಮ್ ಗಂಭೀರ್: ಭಾರತ-ಪಾಕಿಸ್ತಾನ ಪಂದ್ಯದ ನಡುವೆ ಕಂಡುಬಂದಿದ್ದ ಅತ್ಯಂತ ಪ್ರಸಿದ್ಧ ಸ್ಲೆಜಿಂಗ್ ಘಟನೆ ಇದಾಗಿದೆ. ಅಫ್ರಿದಿ ಇತ್ತೀಚೆಗೆ ಈ ಘಟನೆಯ ಬಗ್ಗೆ ಪ್ರಸ್ತಾವಿಸಿದ್ದರು. ಟ್ವೆಂಟಿ-20 ವಿಶ್ವಕಪ್‌ನ ಬಳಿಕ ಗಂಭೀರ್ ಹಾಗೂ ಅಫ್ರಿದಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಗಂಭೀರ್ ಅವರು ಅಫ್ರಿದಿಗೆ ಢಿಕ್ಕಿ ಹೊಡೆದಿದ್ದರು. ಆಗ ಇಬ್ಬರು ಆಟಗಾರರ ನಡುವೆ ವಾಗ್ವಾದ ನಡೆದಿತ್ತು. ಅಂಪೈರ್ ಮಧ್ಯೆ ಪ್ರವೇಶಿಸಿ ಇಬ್ಬರನ್ನು ಸಮಾಧಾನಗೊಳಿಸಿದ್ದರು.
ಹರ್ಭಜನ್ ಸಿಂಗ್-ಶುಐಬ್ ಅಖ್ತರ್: 2010ರ ಏಷ್ಯಾಕಪ್‌ನ ಸೆಮಿಫೈನಲ್‌ನಲ್ಲಿ ಹರ್ಭಜನ್ ಸಿಂಗ್ ಬ್ಯಾಟಿಂಗ್‌ಗೆ ಇಳಿದಾಗ ಶುಐಬ್ ಅಖ್ತರ್ ಬೌಲಿಂಗ್ ದಾಳಿ ನಡೆಸಲು ಬಂದಿದ್ದರು. ಅಖ್ತರ್ ಕೆಲವೊಂದು ಡಾಟ್ ಬಾಲ್‌ಗಳನ್ನು ಎಸೆದು ಹರ್ಭಜನ್ ಬಳಿ ತೆರಳಿ ಕೆಣಕಿದರು.
ಮುಹಮ್ಮದ್ ಆಮಿರ್ ಇನಿಂಗ್ಸ್‌ನ ಕೊನೆಯ ಓವರ್ ಬೌಲಿಂಗ್ ಮಾಡಿದ್ದರು. ಸುರೇಶ್ ರೈನಾರನ್ನು ಔಟ್ ಮಾಡಿದ್ದ ಆಮಿರ್ ಪಾಕ್‌ಗೆ ಗೆಲುವು ತಂದುಕೊಡುವ ವಿಶ್ವಾಸ ಮೂಡಿಸಿದ್ದರು. ಹರ್ಭಜನ್ ಸಿಂಗ್ ಅವರು ಆಮಿರ್ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ಭಾರತಕ್ಕೆ ರೋಚಕ ಗೆಲುವು ತಂದರು. ಭಾರತ ಗೆದ್ದ ನಂತರ ಅಖ್ತರ್‌ರನ್ನು ಗುರಿಯಾಗಿರಿಸಿ ಸಂಭ್ರಮಾಚರಿಸಿಕೊಂಡರು







