ಪ್ರಣೀತ್, ಸೌರಭ್ ವರ್ಮ ಮೂರನೆ ಸುತ್ತಿಗೆ ಲಗ್ಗೆ
ಥಾಯ್ಲೆಂಡ್ ಜಿಪಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿ

ಬ್ಯಾಂಕಾಕ್, ಮೇ 31: ಥಾಯ್ಲೆಂಡ್ ಜಿಪಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸಾಯಿ ಪ್ರಣೀತ್ ಹಾಗೂ ಸೌರಭ್ ವರ್ಮ ಮೂರನೆ ಸುತ್ತಿಗೆ ತೇರ್ಗಡೆಯಾಗಿದ್ದಾರೆ.
12ನೆ ಶ್ರೇಯಾಂಕದ ಸೌರಭ್ ಬುಧವಾರ ನಡೆದ 2ನೆ ಸುತ್ತಿನ ಪಂದ್ಯದಲ್ಲಿ ತಮ್ಮದೇ ದೇಶದ ಆನಂದ್ ಪವಾರ್‌ರನ್ನು 21-17, 20-22, 21-14 ಸೆಟ್‌ಗಳ ಅಂತರದಿಂದ ಸೋಲಿಸಿದರು.
ಕಳೆದ ತಿಂಗಳು ಸಿಂಗಾಪುರ ಓಪನ್ ಪ್ರಶಸ್ತಿ ಜಯಿಸಿದ್ದ ಮೂರನೆ ಶ್ರೇಯಾಂಕದ ಪ್ರಣೀತ್ ಮತ್ತೊಂದು ಎರಡನೆ ಸುತ್ತಿನ ಪಂದ್ಯದಲ್ಲಿ ಮಲೇಷ್ಯಾದ ಆರ್. ಸತೀಶ್‌ಥರನ್‌ರನ್ನು 21-15, 21-13 ಅಂಕಗಳ ಅಂತರದಿಂದ ಮಣಿಸಿದ್ದಾರೆ.
ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಯುವ ಶಟ್ಲರ್ ಸಾಯಿ ಉತ್ತೇಜಿತಾ ರಾವ್ ಇಂಡೋನೇಷ್ಯದ ಜೆಸಿಕಾ ಮುಲ್‌ಜತಿಯವರನ್ನು 13-21, 24-22, 27-25 ಅಂತರದಿಂದ ಮಣಿಸಿ ಎರಡನೆ ಸುತ್ತಿಗೆ ತಲುಪಿದರು.
ಭಾರತದ ಆಟಗಾರರಾದ ಪಿ.ಕಶ್ಯಪ್, ಶ್ರೇಯಾಂಶ್ ಜೈಸ್ವಾಲ್ ಹಾಗೂ ಶುಭಾಂಕರ್ ಡೇ ಪುರುಷರ ಸಿಂಗಲ್ಸ್ ಸ್ಪರ್ಧೆಯಿಂದ ಹೊರ ನಡೆದಿದ್ದಾರೆ. ರೇಶ್ಮಾ ಕಾರ್ತಿಕ್ ಹಾಗೂ ಋತ್ವಿಕ್ ಶಿವಾನಿ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಸೋತಿದ್ದಾರೆ.
ಕಶ್ಯಪ್ ಜರ್ಮನಿಯ ಮಾರ್ಕ್ ಝ್ವೆಬ್ಲೆರ್ ವಿರುದ್ಧ 2ನೆ ಸುತ್ತಿನ ಪಂದ್ಯದಲ್ಲಿ 14-21, 18-21 ಗೇಮ್‌ಗಳಿಂದ ಸೋತಿದ್ದಾರೆ. ಶ್ರೇಯಾಂಶ್ ಸ್ಥಳೀಯ ಶಟ್ಲರ್ ಸಪ್ಪನ್ಯು ಅವಿಹಿಂಗ್‌ಸನನ್ ವಿರುದ್ಧ 9-21, 18-21 ಅಂತರದಿಂದ ಸೋತಿದ್ದಾರೆ.







