ಭಾರತ ತಂಡದಲ್ಲಿ ಆಡುವೆ: ಕಾರ್ತಿಕ್ ವಿಶ್ವಾಸ
ಲಂಡನ್, ಮೇ 31: ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಆಡುವ 11ರ ಬಳಗದಲ್ಲಿ ಆಡುವ ಅವಕಾಶ ಸಿಗುವ ವಿಶ್ವಾಸದಲ್ಲಿದ್ದೇನೆ ಎಂದು ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ನ್ಯೂಝಿಲೆಂಡ್ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ವಿಫಲವಾಗಿದ್ದ ಕಾರ್ತಿಕ್ ಮಂಗಳವಾರ ಬಾಂಗ್ಲಾದೇಶ ವಿರುದ್ಧ ನಡೆದ ಎರಡನೆ ಅಭ್ಯಾಸ ಪಂದ್ಯದಲ್ಲಿ ಕೇವಲ 74 ಎಸೆತಗಳಲ್ಲಿ 94 ರನ್ ಗಳಿಸಿದ್ದರು. ಭಾರತ ಜೂ.4 ರಂದು ಪಾಕಿಸ್ತಾನವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
‘‘ಬಾಂಗ್ಲಾದೇಶ ವಿರುದ್ಧದ ಪಂದ್ಯ ನನ್ನ ಕೌಶಲ್ಯವನ್ನು ಪ್ರದರ್ಶಿಸಲು ಸಿಕ್ಕ ಅವಕಾಶ ವೆಂದು ಭಾವಿಸಿದ್ದೇನೆ. ಆ ಪಂದ್ಯದಲ್ಲಿ ಒಂದಷ್ಟು ರನ್ ಗಳಿಸಿದ್ದಕ್ಕೆ ಸಂತೋಷವಾಗಿದೆ. ಇದೀಗ ನಾನು ಟೂರ್ನಿಯಲ್ಲಿ ಆಡಲು ಸಜ್ಜಾಗಿದ್ದೇನೆಂಬ ಭಾವನೆ ಉಂಟಾಗುತ್ತಿದೆ. ಬಾಂಗ್ಲಾ ವಿರುದ್ಧದ ಪಂದ್ಯ ನನಗೆ ಅತ್ಯಂತ ಮುಖ್ಯವಾಗಿತ್ತು. ಆ ಪಂದ್ಯದಲ್ಲಿ ನಾಯಕ ಹಾಗೂ ಕೋಚ್ ನನ್ನ ಬ್ಯಾಟಿಂಗ್‌ನ್ನು ನೋಡಿದ್ದಾರೆಂಬ ನಂಬಿಕೆ ನನ್ನದು. ನನಗೆ ಅವಕಾಶ ಲಭಿಸಿದಾಗಲೆಲ್ಲಾ ಉತ್ತಮ ಬ್ಯಾಟಿಂಗ್ ಮಾಡಲು ಯತ್ನಿಸಿದ್ದೇನೆ’’ ಎಂದು ಕಾರ್ತಿಕ್ ಹೇಳಿದ್ದಾರೆ.
2000ರಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ವೃತ್ತಿಜೀವನವನ್ನು ಆರಂಭಿಸಿದ್ದ ಕಾರ್ತಿಕ್ ಅವರು ಧೋನಿ ಟೀಮ್‌ಇಂಡಿಯಕ್ಕೆ ಪ್ರವೇಶಿಸುವ ತನಕ ತಂಡದ ಪ್ರಮುಖ ವಿಕೆಟ್‌ಕೀಪರ್ ಆಗಿದ್ದರು.







