ಉಳ್ಳಾಲ: ಮುಂಗಾರಿಗೂ ಮೊದಲೇ ಕಡಲ್ಕೊರೆತದ ಭೀತಿ

ಉಳ್ಳಾಲ, ಮೇ 31: ಮಳೆಗಾಲ ಆರಂಭವಾಗು ತ್ತಿದ್ದಂತೆ ಉಳ್ಳಾಲ ಸಮುದ್ರ ತೀರವಾಸಿಗಳಲ್ಲಿ ಆತಂಕ ಮನೆ ಮಾಡುವುದು ಸಾಮಾನ್ಯ. ಈ ಬಾರೀ ಮುಂಗಾರು ಮಾರುತ ಕರಾವಳಿ ಪ್ರವೇಶಿಸುವ ಮುನ್ನವೇ ಉಳ್ಳಾಲ ಸಮುದ್ರತೀರ ಪ್ರದೇಶದಲ್ಲಿ ಅಲೆಗಳ ಅಬ್ಬರ ಜೋರಾಗಿದೆ.
ಖಿಳ್‌ರಿಯಾ ನಗರ, ಸೋಮೇಶ್ವರ, ಉಚ್ಚಿಲದಲ್ಲಿ ಮನೆ ಹಾಗೂ ಮಸೀದಿಗೆ ಬೃಹತ್ ಅಲೆಗಳು ಬುಧವಾರ ಮಧ್ಯಾಹ್ನದಿಂದಲೇ ಅಪ್ಪಳಿಸಲು ಆರಂಭಿಸಿದ್ದು, ಈ ಭಾಗದ ಜನರು ಆತಂಕಗೊಂಡಿದ್ದಾರೆ. ಖಿಳ್‌ರಿಯಾ ನಗರದಲ್ಲಿರುವ 10ಕ್ಕೂ ಅಧಿಕ ಮನೆಗಳು, ಮಸೀದಿಗೆ ಬೃಹತ್ ಅಲೆಗಳು ಅಪ್ಪಳಿ ಸುತ್ತಿವೆ. ಮಳೆ ಆರಂಭವಾಗುವ ಮೊದಲೇ ಸಮುದ್ರದ ಅಲೆಗಳ ರಭಸ ಹೆಚ್ಚಿರುವುದು ಆತಂಕಕ್ಕೆ ಕಾರಣವಾಗಿದೆ.
ಮೊಗವೀರಪಟ್ಣ, ಕೋಟೆಪುರ ಪ್ರದೇಶದಲ್ಲಿ ಶಾಶ್ವತ ಬ್ರೇಕ್ ವಾಟರ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಮುದ್ರದ ಅಲೆಗಳು ಖಿಳ್‌ರಿಯಾ ನಗರ, ಸುಭಾಷ್ ನಗರ, ಉಚ್ಚಿಲ, ಸೋಮೇಶ್ವರ ಭಾಗದಲ್ಲಿ ಅಪ್ಪಳಿಸುತ್ತಿವೆ ಎಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ.
*ಹೆಚ್ಚುತ್ತಿರುವ ಭೀತಿ: ಕಳೆದ ಮಳೆಗಾಲ ಆರಂಭದಿಂದಲೂ ಕಡಲ್ಕೊರೆತದ ಅಬ್ಬರದಿಂದ ತೀರವಾಸಿಗಳು ಬಹಳಷ್ಟು ಸಂಕಷ್ಟ ಎದುರಿಸಿದ್ದರು. ಇದೀಗ ಮಳೆಗಾಲ ಆರಂಭಕ್ಕೆ ಮುನ್ನವೇ ಕಡಲು ಅಬ್ಬರಿಸಲು ಆರಂಭಿಸಿರುವುದು ಈ ಭಾಗದ ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.