ಗುಜರಾತ್ ಪೊಲೀಸರು ಮಲಪ್ಪುರಂನಿಂದ ಬಂಧಿಸಿದ ಶುಹೈಬ್ ನಿರಪರಾಧಿ: ಬಂಧುಗಳ ಅಳಲು

ಕ್ಯಾಲಿಕಟ್,ಜೂನ್ 1: ಅಹ್ಮದಾಬಾದ್ ಸ್ಫೋಟಕ್ಕೆ ಸಂಬಂಧಿಸಿ ಮೇ 22ಕ್ಕೆ ಕರಿಪ್ಪೂರ್‌ನಿಂದ ಗುಜರಾತ್ ಪೊಲೀಸರು ಬಂಧಿಸಿದ ಮಲಪ್ಪುರಂ ಕೊಡಿಂಞಿ ನಿವಾಸಿ ಶುಹೈಬ್ ನಿರಪರಾಧಿ ಎಂದು ಆತನ ಸಂಬಂಧಿಕರು ಹೇಳಿದ್ದಾರೆ. ಶುಹೈಬ್‌ನ ಬಂಧನ ಕಾನೂನುಬಾಹಿರವಾಗಿದ್ದು, ಮಾಧ್ಯಮಗಳು ಕೂಡಾ ಘಟನೆಯ ಕುರಿತು ತಪ್ಪು ವರದಿಗಳನ್ನು ಪ್ರಕಟಿಸುತ್ತಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಮಲಪ್ಪುರಂ ಜಿಲ್ಲೆಯ ರಂಡತ್ತಾಣಿ ಸಮೀಪದಲ್ಲಿ ಕೊಂಡೊಟ್ಟಯ ಸತ್ತಾರ್ ಭಾಯಿ ಎನ್ನುವವರು ಇಲೆಕ್ಟ್ರಾನಿಕ್ ಸಂಸ್ಥೆ ಆರಂಭಿಸಿದಾಗ ಶುಹೈಬ್‌ನನ್ನು ಕೆಲಸಕ್ಕೆ ಇಟ್ಟುಕೊಂಡಿದ್ದರು. ನಂತರ ಈ ಸಂಸ್ಥೆ ಮುಚ್ಚಿಹೋಗಿದ್ದು, ಶುಹೈಬ್ ಬೇರೆ ಕೆಲಸಗಳನ್ನು ಮಾಡುತ್ತಿದ್ದ. ಆದರೆ ಸತ್ತಾರ್‌ಭಾಯಿಯನ್ನು ಪೊಲೀಸರು ಕೆಲವು ಪ್ರಕರಣಗಳಲ್ಲಿ ಬಂಧಿಸಿದ್ದರು. ಅಬಳಿಕ ಶುಹೈಬ್‌ನನ್ನು ಕೇಳಿ ಕುಟುಂಬವನ್ನು ಭೇಟೆಯಾಡಲು ಆರಂಭಿಸಿದ್ದಾರೆ. ಪೈಪ್‌ಬಾಂಬ್ ಪ್ರಕರಣ, ಗುಜರಾತ್‌ನ ವಿವಿಧ ಸ್ಥಳಗಳಲ್ಲಿ ನಡೆದ ಸ್ಫೋಟ ಪ್ರಕರಣಗಳ ಭೂಗತ ಆರೋಪಿಯೆಂದು ಪೊಲೀಸರು ಹೇಳುತ್ತಿದ್ದಾರೆ. ಕುಮನ್‌ಕಲ್ ಪೈಪ್ ಬಾಂಬ್ ಪ್ರಕರಣದಲ್ಲಿ ಯಾವತ್ತೂ ಶುಹೈಬ್‌ನ ಹೆಸರು ಕೇಳಿಬಂದಿಲ್ಲ. ಊರಿನಲ್ಲಿ ಯಾವ ಪ್ರಕರಣದಲ್ಲಿಯೂ ಭಾಗಿಯಾಗದ ಶುಹೈಬ್‌ನನ್ನು ಇಂಡಿಯನ್ ಮುಜಾಹಿದ್ ಗಲ್ಫ್ ಸಂಯೋಜಕ ಎಂದೂ, ಸಿಮಿಕಾರ್ಯಕರ್ತ ಎಂದೂ ಮಾಧ್ಯಮಗಳು ಅಪಪ್ರಚಾರ ನಡೆಸುತ್ತಿವೆ ಎಂದು ಕುಟುಂಬ ಆರೋಪಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಶುಹೈಬ್‌ರ ಸಹೋದರರಾದ ಶಮೀಂ, ಸಾಬಿರ್, ತಂದೆ ಅಬ್ದುಲ್‌ಖಾದರ್, ಸಹೋದರಿ ಗಂಡ ಅಬ್ದುಲ್ ಹಮೀದ್, ಮಾನವಹಕ್ಕು ಕಾರ್ಯಕರ್ತ ಮಿರ್ಶಾದ್ ರಹ್ಮಾನ್ ಮುಂತಾದವರು ಉಪಸ್ಥಿತರಿದ್ದರು.





